ಬಿಜಿಂಗ್(ನ.6): ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ-ಪಾಕಿಸ್ತಾನ ನಡುವೆ ಖಾಸಗಿ ಬಸ್ ಸಂಚಾರ ಸೇವೆಗೆ ಚಾಲನೆ ನೀಡಲಾಗಿದೆ. 

ಪಾಕಿಸ್ತಾನ ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ತಾನದ ಲಾಹೋರ್‌ನಿಂದ ಚೀನಾದ ಕಷ್ಗರ್ ನಡುವೆ ಬಸ್ ಸೇವೆಗೆ ಚಾಲನೆ ನೀಡಲಾಗಿದ್ದು, 36 ಗಂಟೆಗಳ ಪ್ರಯಾಣ ಇದಾಗಿದೆ.

ಇತ್ತೀಚಿಗಷ್ಟೇ ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಈ ಬಸ್ ಸೇವೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಈ ಬಸ್ ಸೇವೆ ಉಲ್ಲಂಘಿಸುತ್ತದೆ ಎಂದಿದ್ದರು.

1963ರಲ್ಲಿ ಮಾಡಿಕೊಂಡಿದ್ದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದ ಅಕ್ರಮ, ಕಾನೂನು ಬಾಹಿರವಾಗಿದ್ದು ಅದಕ್ಕೆ ಮೌಲ್ಯವಿಲ್ಲವಾಗಿದೆ. ಅದನ್ನು ಭಾರತ ಸರ್ಕಾರ ಎಂದಿಗೂ ಗುರುತಿಸಲಿಲ್ಲ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಯಾವುದೇ ಬಸ್ ಸೇವೆ ಭಾರತದ ಸ್ವಾಯತ್ತತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ರವೀಶ್ ಕುಮಾರ್ ಹೇಳಿದ್ದರು.