ಯಾರೂ ಹೋಗಿರದ ಜಾಗದಲ್ಲಿ ಚೀನಾ!: ಚಂದ್ರನ ಹಿಂಬದಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ
ಚಂದ್ರನ ಹಿಂಬದಿಗೆ ಚೀನಾ ಲಗ್ಗೆ| ಇದೇ ಮೊದಲ ಬಾರಿಗೆ ನೌಕೆ ಇಳಿಸಿ ಇತಿಹಾಸ ಸೃಷ್ಟಿ| ಯಾರೂ ಹೋಗಿರದ ಜಾಗದಲ್ಲಿ ಚೀನಾ ಅಧ್ಯಯನ| ಇಳಿಯುತ್ತಿದ್ದಂತೆ ಫೋಟೋ ಕಳುಹಿಸಿದ ‘ಚಾಂಗ್ ಎ-4’
ಬೀಜಿಂಗ್[ಜ.04]: ಈವರೆಗೆ ಯಾವ ದೇಶವೂ ಹೋಗಿಲ್ಲದ ಚಂದ್ರನ ಹಿಂಬದಿಯಲ್ಲಿ ತನ್ನ ಶೋಧಕ ಯಂತ್ರವೊಂದನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಗುರುವಾರ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಹೊಸ ಇತಿಹಾಸ ಸೃಷ್ಟಿಸಿದೆ. ತನ್ಮೂಲಕ ಬಾಹ್ಯಾಕಾಶ ಕ್ಷೇತ್ರದ ಸೂಪರ್‌ಪವರ್ ಆಗುವ ತನ್ನ ಮಹದಾಸೆ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ.
ಭೂಮಿಯತ್ತ ಮುಖ ಮಾಡಿರುವ ಚಂದ್ರನ ಅಂಗಳಕ್ಕೆ ಕೆಲವೊಂದು ದೇಶಗಳು ಹೋಗಿ ಬಂದಿವೆ. ಆದರೆ ಭೂಮಿಗೆ ಕಾಣದ ಚಂದ್ರನ ಮತ್ತೊಂದು ಬದಿಯಲ್ಲಿ ಈವರೆಗೂ ಯಾವ ದೇಶವೂ ರೋವರ್‌ನಂತಹ ಶೋಧಕ ಯಂತ್ರಗಳನ್ನು ಇಳಿಸಿಲ್ಲ. ಭೂಮಿಗೆ ಕಾಣದೇ ಇರುವ ಆ ಭಾಗವನ್ನು ‘ಡಾರ್ಕ್ಸೈಡ್’ ಎಂದು ವಿಜ್ಞಾನಿಗಳು ಕರೆಯುತ್ತಾರೆ. ಇದರರ್ಥ ಅಲ್ಲಿ ಕತ್ತಲಿದೆ ಎಂದಲ್ಲ, ಕಾಣಿಸದ ಭಾಗ ಎಂದು. ಭೂಮಿಗೆ ಕಾಣಿಸುವ ಚಂದ್ರನಲ್ಲಿ ಎಷ್ಟುಬೆಳಕಿರುತ್ತದೋ, ಅಷ್ಟೇ ಬೆಳಕು ಹಿಂಬದಿಯಲ್ಲೂ ಇರುತ್ತದೆ. ಇಂತಹ ಜಾಗದಲ್ಲಿ ಗುರುವಾರ ‘ಚಾಂಗ್’ಎ-4’ ಎಂಬ ತನ್ನ ರೋವರ್ ಅನ್ನು ಚೀನಾ ಯಶಸ್ವಿಯಾಗಿ ಇಳಿಸಿದೆ. ಲ್ಯಾಂಡ್ ಆಗುತ್ತಿದ್ದಂತೆ ಚಂದ್ರನ ತೀರಾ ಹತ್ತಿರದ ಫೋಟೋವನ್ನು ತೆಗೆದು ನೌಕೆ ರವಾನಿಸಿದೆ. ಚೀನಾದ ಈ ಸಾಹಸಕ್ಕೆ ಖುದ್ದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆ ಸಲ್ಲಿಸಿದೆ.
ಚಾಂಗ್’ಎ-4 ರೋವರ್ ಅನ್ನು ಡಿ.8ರಂದು ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್ ಉಪಗ್ರಹ ಕೇಂದ್ರದಿಂದ ಲಾಂಗ್ ಮಾಚ್‌ರ್-3ಬಿ ರಾಕೆಟ್‌ನಲ್ಲಿಟ್ಟು ಚೀನಾ ಉಡಾವಣೆ ಮಾಡಿತ್ತು. ಈಗ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿರುವ ರೋವರ್ ಅಲ್ಲಿ ಅಡ್ಡಾಡುತ್ತಾ ಚಂದ್ರನ ಅಂಗಳದ ಭೂಗರ್ಭ ಹಾಗೂ ಜೈವಿಕ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿಕೊಡಲಿದೆ.
ಚಂದ್ರನ ಹಿಂಬದಿಯ ಭಾಗ ಇದಾಗಿರುವುದರಿಂದ ಭೂಮಿ ಜತೆ ನೇರ ಸಂಪರ್ಕ ಸಾಧಿಸಲು ಆಗುವುದಿಲ್ಲ. ಈ ಕಾರಣಕ್ಕೆ ಕಳೆದ ಮೇ ನಲ್ಲೇ ಚೀನಾ ಸಂಪರ್ಕ ಉಪಗ್ರಹ ಉಡಾವಣೆ ಮಾಡಿತ್ತು. ಅದು ಭೂಮಿ ಹಾಗೂ ರೋವರ್ ನಡುವೆ ಸಂಪರ್ಕ ಬೆಸೆದು ಭೂಮಿಗೆ ಮಾಹಿತಿ ರವಾನಿಸುತ್ತದೆ.
ಚಂದ್ರನ ಹಿಂಬದಿಯ ಚಿತ್ರವನ್ನು ಕಕ್ಷೆ ಸುತ್ತುತ್ತಲೇ ಹಲವು ನೌಕೆಗಳು ಸೆರೆ ಹಿಡಿದಿವೆ. ಆದರೆ ಅಲ್ಲಿಗೆ ಯಾವ ದೇಶವೂ ರೋವರ್ ಇಳಿಸಿರಲಿಲ್ಲ. ಚೀನಾದ ಸಾಹಸದಿಂದಾಗಿ ಚಂದ್ರನ ಹಿಂಬದಿಯಲ್ಲಿರುವ ಹಲವು ರಹಸ್ಯಗಳು ತಿಳಿಯುವ ನಿರೀಕ್ಷೆ ಇದೆ.