"ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಸಂವಿಧಾನದಲ್ಲಿ ಪ್ರತ್ಯೇಕ ಧರ್ಮ ರಚನೆಗೆ ಅವಕಾಶವಿದೆ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮ ಒಗ್ಗಟ್ಟನ್ನು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಮತ್ತು ಯಡಿಯೂರಪ್ಪನವರು," ಎಂದು ನಟ ಚೇತನ್ ನೇರವಾಗಿ ಆರೋಪಿಸಿದ್ದಾರೆ.
ಬೆಂಗಳೂರು(ಆ. 30): ಹನ್ನೆರಡನೇ ಶತಮಾನದ ಶರಣರ ತತ್ವ ಈಗ 21ನೇ ಶತಮಾನದಲ್ಲಿ ಪುರೋಹಿತಾಶಾಯಿಯಾಗಿ ಬದಲಾವಣೆಯಾಗಿದ್ದು, ಇದು ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ನಟ ಚೇತನ್ ಕಳವಳ ವ್ಯಕ್ತಪಡಿಸಿದ್ದಾರೆ. "ಲಿಂಗಾಯತ ಧರ್ಮ - ಸ್ವತಂತ್ರ ಧರ್ಮ" ವಿಚಾರ ವೇದಿಕೆಯಲ್ಲಿ ನಟ ಚೇತನ್ ಅವರು ಲಿಂಗಾಯತ ಧರ್ಮದ ಒಗ್ಗಟ್ಟು ಮುರಿಯಲು ಯತ್ನಿಸುತ್ತಿರುವವರ ವಿರುದ್ಧ ತಿರುಗಿಬಿದ್ದಿದ್ದಾರೆ.
ಹಿಂದೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳು ಅಸಮಾನತೆ ಇರುವ ಧರ್ಮಗಳಾಗಿವೆ ಎಂದು ಅಭಿಪ್ರಾಯಪಟ್ಟ ಚೇತನ್, ವೀರಶೈವದಲ್ಲೂ ಲಿಂಗಭೇದ, ಜಾತಿಭೇದ ಮತ್ತು ದೇವಾಲಯದ ಆಚರಣೆ ಇದೆ ಎಂದು ವಿಷಾದಿಸಿದ್ದಾರೆ.
"ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಸಂವಿಧಾನದಲ್ಲಿ ಪ್ರತ್ಯೇಕ ಧರ್ಮ ರಚನೆಗೆ ಅವಕಾಶವಿದೆ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮ ಒಗ್ಗಟ್ಟನ್ನು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಮತ್ತು ಯಡಿಯೂರಪ್ಪನವರು," ಎಂದು ನಟ ಚೇತನ್ ನೇರವಾಗಿ ಆರೋಪಿಸಿದ್ದಾರೆ.
"ಸಿನಿಮಾ ರಂಗದವರೊಬ್ಬರು, ಕ್ರಾಂತಿಕಾರಿ ಚಿಂತಕರ ಮಗ ಹೇಳ್ತಾರೆ ಯಡಿಯೂರಪ್ಪನವರು ಅಭಿನವ ಬಸವಣ್ಣ ಅಂತ... ಯಡಿಯೂರಪ್ಪನವರು ಈ ಶೀರ್ಷಿಕೆಗೆ ಎಷ್ಟು ಅರ್ಹ? ಒಂದು ಮಾತ್ ಹೇಳ್ತೇನೆ... ಯಡಿಯೂರಪ್ಪನವರು ಬ್ಲ್ಯಾಕ್'ಮ್ಯಾಜಿಕ್ ಒಪ್ಪಿಕೊಂಡಿರೋ ಸ್ವಯಂಸೇವಕ... ಹಾಗೆ ನೋಡೋಕೆ ಹೋದ್ರೆ ಬಸವಣ್ಣನವರು ಇದನ್ನ ಒಪ್ತಾ ಇದ್ರಾ...? ಖಂಡಿತ ಒಪ್ಪಲ್ಲ... ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೂ ಅವರನ್ನ ಭ್ರಷ್ಟಾಚಾರ ಆರೋಪದ ಮೇಲೆ ಕೆಳಗಿಳಿಸಲಾಯಿತು. ಅದರ ಜೊತೆಗೆ, 300 ಕೋಟಿ ಕರ್ನಾಟಕದ ದುಡ್ಡು ತೆಗೆದುಕೊಂಡು, ಧಾರ್ಮಿಕ ವ್ಯವಸ್ಥೆಗೆ ದೇವಸ್ಥಾನಗಳಾಗಿರಬಹುದು, ಮಠಗಳಾಗಿರಬಹುದು, ಇಡೀ ದಕ್ಷಿಣ ಭಾರತಕ್ಕೆ ಹಣ ಚೆಲ್ಲಿದ್ದಾರೆ....
"ಇತ್ತೀಚೆಗೆ ಅಸ್ಪೃಶ್ಯತೆ ಮಾಡಿದ್ದಾರೆಂಬ ಆರೋಪವಿದೆ. ದಲಿತರ ಮನೆಯಲ್ಲಿ ತಿಂತೀನಿ ಅನ್ನೋ ನಾಟಕ ಆದ್ಮೇಲೆ ಇದೆಲ್ಲಾ ಆಗಿದೆ. ಇದನ್ನ ನಮ್ಮ ಬಸವಣ್ಣನವರು ಒಪ್ತಾ ಇದ್ರಾ?" ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.
ನಟ ಚೇತನ್ ಅವರು ಯಡಿಯೂರಪ್ಪ ವಿರುದ್ಧ ಆರೋಪ ಮಾಡುತ್ತಿದ್ದಂತೆಯೇ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇದಿಕೆಯಲ್ಲಿ ರಾಜಕೀಯ ತರಬೇಡಿ ಎಂದು ಆ ವ್ಯಕ್ತಿ ಆಗ್ರಹಿಸಿದರು. ಪ್ರತಿಭಟನೆ ನಡೆಸಿದ ಆ ವ್ಯಕ್ತಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಯಡಿಯೂರಪ್ಪನವರ ವಿರುದ್ಧ ಯಾರೇ ಟೀಕೆ ಮಾಡಿದರೂ ಈ ವ್ಯಕ್ತಿ ವಿರೋಧ ವ್ಯಕ್ತಪಡಿಸುತ್ತಾರೆಂಬುದು ವಿಶೇಷ. ಹಿಂದೆ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮದಲ್ಲೂ ಇವರು ಬಿಎಸ್'ವೈ ಪರ ಘೋಷಣೆ ಕೂಗಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ಬಿಎಸ್'ವೈ ವಿರುದ್ಧ ಯಾರಾದರೂ ಮಾತನಾಡಿದರೆ ಇವರು ಪ್ರತಿಭಟನೆ ನಡೆಸುತ್ತಾರೆ.
