‘‘ಸಾಹಿತ್ಯ, ಸಂಗೀತದ ನಾಡು ಧಾರವಾಡ ಇದೀಗ ಸಂಘರ್ಷದ ತ್ರಿವೇಣಿ ಸಂಗಮವಾಗಿದೆ. ಗೋಕಾಕ, ಮಂಡಳ ಚಳವಳಿ ನಡೆದ ಈ ನಾಡಿನಲ್ಲಿ ವೈಚಾರಿಕತೆಯ ಹತ್ಯೆಯಾಗಿದ್ದು, ಹಂತಕರನ್ನು ಬಂಧಿಸಲು ಇಂತಹ ಚಳವಳಿ ನಡೆದಿರುವುದು ಆತಂಕ ತಂದಿದೆ. ಧಾರವಾಡದ ಸಂಘರ್ಷದ ಮೂಲ ಕೇಂದ್ರವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗಲಾದರೂ ಕಲಬುರ್ಗಿ ಹತ್ಯೆಯ ಗಂಭೀರತೆ ಅರಿತು ಶೀಘ್ರ ಹಂತಕರನ್ನು ಬಂಧಿಸಬೇಕು’’

ಧಾರವಾಡ: ‘‘ಐದು ಸಾವಿರ ವರ್ಷಗಳಿಂದ ನಮ್ಮನ್ನಾಳುತ್ತಿರುವ ವೈದಿಕ ಬ್ರಾಹ್ಮಣರು, ವೀರಶೈವ ಮತ್ತು ಲಿಂಗಾಯತರು ಕೋಮುವಾದ ತರಲು ಹೆಗಲುಗಳಾಗಿ ಪರಿಣಮಿಸಿದ್ದಾರೆ’’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಕಲಬುರ್ಗಿ ಹತ್ಯೆ ಖಂಡಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ಕಲಬುರ್ಗಿ ನನ್ನ ಸಹಪಾಠಿ. ಮೂಲಭೂತವಾದಿಗಳ ಒಳಸಂಚಿನಿಂದ ಬಲಿಯಾಗಿದ್ದಾರೆ’’ ಎಂದರು.

‘‘ಸಾಹಿತ್ಯ, ಸಂಗೀತದ ನಾಡು ಧಾರವಾಡ ಇದೀಗ ಸಂಘರ್ಷದ ತ್ರಿವೇಣಿ ಸಂಗಮವಾಗಿದೆ. ಗೋಕಾಕ, ಮಂಡಳ ಚಳವಳಿ ನಡೆದ ಈ ನಾಡಿನಲ್ಲಿ ವೈಚಾರಿಕತೆಯ ಹತ್ಯೆಯಾಗಿದ್ದು, ಹಂತಕರನ್ನು ಬಂಧಿಸಲು ಇಂತಹ ಚಳವಳಿ ನಡೆದಿರುವುದು ಆತಂಕ ತಂದಿದೆ. ಧಾರವಾಡದ ಸಂಘರ್ಷದ ಮೂಲ ಕೇಂದ್ರವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗಲಾದರೂ ಕಲಬುರ್ಗಿ ಹತ್ಯೆಯ ಗಂಭೀರತೆ ಅರಿತು ಶೀಘ್ರ ಹಂತಕರನ್ನು ಬಂಧಿಸಬೇಕು’’ ಎಂದು ಆಗ್ರಹಿಸಿದರು.

‘‘ಎಲ್ಲಿಗೆ ಬಂತು ಸಂಗಯ್ಯ, ಇಲ್ಲಿಗೆ ಬಂತು ಸಂಗಯ್ಯ, ಇನ್ನೂ ಅಲ್ಲೆ ಇದೆ ಸಂಗಯ್ಯ ಎನ್ನುವಂತಾಗಿದೆ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆ. ಸಿಐಡಿ ತನಿಖೆ ವರ್ಷ ಕಳೆದರೂ ಇನ್ನೂ ಮೊದಲ ಹಂತದಲ್ಲಿದೆ’’ ಎಂದು ಹಿರಿಯ ಸಾಹಿತಿ ಚಂಪಾ ವ್ಯಂಗ್ಯವಾಗಿ ಹೇಳಿದರು.

ಮಳೆಯಲ್ಲ ಕಣ್ಣೀರು!
ಧಾರವಾಡದ ಆರ್‌ಎಲ್‌ಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಆರಂಭದಲ್ಲಿ ‘ಧೋ’ ಎಂದು ಧಾರಕಾರ ಮಳೆ ಸುರಿಯಲಾರಂಭಿಸಿತ್ತು. ಮಳೆಯ ನಡುವೆಯೂ ರಾಜ್ಯ, ಹೊರ ರಾಜ್ಯದ ಚಿಂತಕರು, ಲೇಖಕರು ಹಾಗೂ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡು ವೈಚಾರಿಕತೆಯ ಹತ್ಯೆಯನ್ನು ಒಕ್ಕೊರಲಿನಿಂದ ಖಂಡಿಸಿದರು. ಮಳೆಯಲ್ಲಿ ತೊಯ್ದರು ಯಾರೂ ಅಲ್ಲಿಂದ ಕದಲಲಿಲ್ಲ. ಮೈಕ್ ಹಿಡಿದು ವೇದಿಕೆ ಮೇಲೆ ನಿಂತ ಖ್ಯಾತ ಭಾಷಾ ತಜ್ಞ ಜಿ.ಎನ್. ದೇವಿ ಎಲ್ಲರನ್ನೂ ವೇದಿಕೆ ಬಳಿ ಕರೆದು ಘೋಷಣೆಗಳನ್ನು ಕೂಗುತ್ತಾ, ‘‘ಇದು ಮಳೆಯಲ್ಲ. ಕಲಬುರ್ಗಿ, ಪಾನ್ಸರೆ, ದಾಭೋಲ್ಕರ ಕುಟುಂಬಸ್ಥರ ಕಣ್ಣೀರು’’ ಎಂದು ಭಾವಪರವಶವಾಗಿ ಮಾತನಾಡಿ ಎಲ್ಲರನ್ನೂ ಹುರಿದುಂಬಿಸಿದರು. ಕ್ಷಣ ಹೊತ್ತು ಸುರಿದ ಮಳೆ ಮಾಯವಾದ ಬಳಿಕ ಸುದೀರ್ಘ ಸಮಾವೇಶ ನಡೆಯಿತು.

(ಕನ್ನಡಪ್ರಭ ವಾರ್ತೆ)