ಅಂಬಿಡೆಂಟ್​ ಕಂಪನಿ ವಂಚನೆ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿಯನ್ನ ಬಂಧನ ಮಾಡಲಾಗಿದೆ. ಹಾಗಾದ್ರೆ ಸಿಸಿಬಿ ಮುಂದಿನ ಕಾರ್ಯವೇನು? ರೆಡ್ಡಿಗೆ ಜೈಲಾ? ಬೇಲಾ?

ಬೆಂಗಳೂರು, [ನ.11]: ಅಂಬಿಡೆಂಟ್​ ಕಂಪನಿ ವಂಚನೆ ಪ್ರಕರಣ ಸಂಬಂಧ 23 ಗಂಟೆಗಳ ವಿಚಾರಣೆ ಬಳಿಕ ಜನಾರ್ದನ ರೆಡ್ಡಿಯನ್ನ ಬಂಧನ ಮಾಡಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಹಣ ಸಂಗ್ರಹ ನಿಷೇಧ ಕಾಯಿದೆಯಡಿ ರೆಡ್ಡಿ ಅವರನ್ನ ಬಂಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ. 

ಈ ಬಗ್ಗೆ ಇಂದು [ಭಾನುವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಅಂಬಿಡೆಂಟ್​ ​ ಕಂಪನಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಜನರಿಗೆ ನ್ಯಾಯವೊದಗಿಸಲು ಮತ್ತು ಅವರ ಹಣವನ್ನು ಅವರಿಗೆ ವಾಪಸ್​ ಕೊಡಿಸಲು ರೆಡ್ಡಿ ಬಂಧನ ಅನಿವಾರ್ಯವಾಗಿದೆ.

ಇಂದು ರೆಡ್ಡಿ ಅವರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ. ಅಷ್ಟೇ ಅಲ್ಲದೇ ಹೆಚ್ಚಿನ ವಿಚರಣೆಗೆ 14 ದಿನಗಳ ಪೊಲೀಸ್​​ ಕಸ್ಟಡಿಗೆ ಕೇಳುತ್ತೇವೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.

ಆದರೆ ರೆಡ್ಡಿಗೆ ನ್ಯಾಯಾಂಗ ಬಂಧನಕ್ಕೆ ಕೊಡುತ್ತಾರೋ ಅಥವಾ ಪೊಲೀಸ್ ಕಸ್ಟಡಿಗೆ ನೀಡುತ್ತಾರೋ ಎನ್ನುವುದು ನ್ಯಾಯಧೀಶರಿಗೆ ಬಿಟ್ಟಿರುವಂತದ್ದು.