ರಾಹುಲ್ ಗಾಂಧಿ ಆರೋಪಕ್ಕೆ ಗರಂ ಆದ ಸಿಬಿಐ! ಮಲ್ಯ ದೇಶ ಬಿಡಲು ಸಿಬಿಐ ಅಧಿಕಾರಿ ಕಾರಣ ಎಂದಿದ್ದ ರಾಹುಲ್! ಪ್ರಧಾನಿ ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಎಂದಿದ್ದ ರಾಹುಲ್! ರಾಹುಲ್ ಆರೋಪ ಸ್ಪಷ್ಟವಾಗಿ ತಳ್ಳಿಹಾಕಿದ ಸಿಬಿಐ
ನವದೆಹಲಿ(ಸೆ.16): ದೇಶಭ್ರಷ್ಟ ವಿಜಯ್ ಮಲ್ಯ ದೇಶ ಬಿಡಲು ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ’ ಸಿಬಿಐ ಅಧಿಕಾರಿಯೋರ್ವರು ಸಹಾಯ ಮಾಡಿದ್ದಾರೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಐ ಮಾಧ್ಯಮ ವಕ್ತಾರ, ಮಲ್ಯ ವಿಚಾರದಲ್ಲಿ ಕೆಲವರು ಸಿಬಿಐಯನ್ನು ಅನಗತ್ಯವಾಗಿ ಎಳೆದು ತರುತ್ತಿದ್ದು, ಇಂತಹ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಹುಲ್ ಅವರ ‘ನೆಚ್ಚಿನ’ ಪದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಸಿಬಿಐ, ಸಂಸ್ಥೆ ನಿರ್ದಿಷ್ಟ ವ್ಯಕ್ತಿಯ ಪರ ಕೆಲಸ ಮಾಡುವುದಿಲ್ಲ, ಬದಲಿಗೆ ಸರ್ಕಾರ ಮತ್ತು ದೇಶದ ಪರವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದೆ.
ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ, ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ನಿನ್ನೆ ನೇರ ಆರೋಪ ಮಾಡಿದ್ದರು.
