ನವದೆಹಲಿ (ಸೆ.17): ಬಹುಕೋಟಿ ಎಂಬ್ರೇಯರ್ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಕೇಂದ್ರೀಯ ಅಪರಾಧ ದಳದ ಅಧಿಕಾರಿಗಳು ಹಗರಣದಲ್ಲಿ ಕಿಕ್ ಬ್ಯಾಕ್ ಆರೋಪದ ಮೇರೆಗೆ ರಕ್ಷಣಾ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2008ರಲ್ಲಿ ಈ ಬಹುಕೋಟಿ ವಿಮಾನ ಖರೀದಿ ಹಗರಣ ನಡೆದಿದೆ ಎನ್ನುವುದು ಆರೋಪ.
ಡಿಆರ್ ಡಿಒ ವಿಜ್ಞಾನಿಗಳು ಸಂಶೋಧಿಸಿದ್ದ ನೂತನ ರಾಡಾರ್ ಗಳನ್ನು ವಿಮಾನಕ್ಕೆ ಅಳವಡಿಸಲು 2008ರಲ್ಲಿ ಬ್ರೆಜಿಲ್ ಮೂಲದ ಎಂಬ್ರೇಯರ್ ಸಂಸ್ಥೆಯಿಂದ 208 ಮಿಲಿಯನ್ ಡಾಲರ್ ಮೊತ್ತದಲ್ಲಿ ವಿಮಾನ ಖರೀದಿಸಲಾಗಿತ್ತು. ಈ ಒಪ್ಪಂದ ಕುದುರಿಸಲು ಭಾರತ ಮೂಲದ ಬ್ರಿಟನ್ ಪ್ರಜೆ ಭಾರಿ ಪ್ರಮಾಣದಲ್ಲಿ ಎಂಬ್ರೇಯರ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆದಿದ್ದ ಎಂದು ಬ್ರೆಜಿಲ್ ನ ಖ್ಯಾತ ಪತ್ರಿಕೆಯೊಂದು ವರದಿ ಮಾಡಿತ್ತು.
ಈ ವರದಿ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬ್ರೆಜಿಲ್ ಮೂಲದ ಎಂಬ್ರೇಯರ್ ಸಂಸ್ಥೆಯಿಂದ ಸ್ಪಷ್ಟನೆ ಕೇಳಿದ್ದರು. ಅಲ್ಲದೆ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐ ಸಂಸ್ಥೆಯನ್ನೂ ಕೇಳಿದ್ದರು.
ಈ ಸಂಬಂಧ ಅಧಿಕೃತವಾಗಿ ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದ್ದು, ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗುತ್ತಿದೆ.
