ನವದೆಹಲಿ(ಆ.21): ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಮಧ್ಯೆ ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಪಿ.ಚಿದಂಬರಂ, ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೇ ಮತ್ತೆ ಪರಾರಿಯಾದ ಘಟನೆ ನಡೆದಿದೆ.

ಚಿದಂಬರಂ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿರುವುದನ್ನು ಮನಗಂಡ ಸಿಬಿಯ ಮತ್ತು ಇಡಿ ಅಧಿಕಾರಿಗಳು, ಕಾಂಗ್ರೆಸ್ ಕಚೇರಿಗೆ ಆಗಮಿಸಿದಾಗ ಕಾರ್ಯಕರ್ತರ ಬೃಹತ್ ಪಡೆ ಅವರನ್ನು ತಡೆಯಿತು.

ಬಳಿಕ ಚಿದಂಬರಂ ಕಚೇರಿಯಿಂದ ನಿರ್ಗಮಿಸಿದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ನೇರವಾಗಿ ಚಿದು ಮನೆಗೆ ಲಗ್ಗೆ ಇಟ್ಟರು. ಅಲ್ಲದೇ ಒತ್ತಾಯಪೂರ್ವಕವಾಗಿ ಮನೆಯ ಗೇಟ್’ನ್ನು ತೆರೆದು ಒಳ ನುಗ್ಗಿದ್ದಾರೆ.

ಸದ್ಯ ಸಿಬಿಐ ಮತ್ತು ಇಡಿ ಅಧಿಕಾರಿಗಳು ಚಿದಂಬರಂ ಮನೆಯಲ್ಲಿ ಇದ್ದು, ಯಾವುದೇ ಕ್ಷಣದಲ್ಲಿ ಅವರ ಬಂಧನವಾಗುವ ಸಾಧ್ಯತೆ ಇದೆ.

ಪಿ.ಚಿದಂಬರಂಮನೆ ಮುಂದೆಯೂ ಅಪಾರ ಸಂಖ್ಯೆಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.