ಶ್ರೀರಂಗಪಟ್ಟಣ (ಸೆ.17): ಕಾವೇರಿ ಜಲ ವಿವಾದವನ್ನು ರಾಷ್ಟ್ರಪತಿ ಅಂಗಳಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ರಾಜ್ಯ ರೈತ ಸಂಘ, ರಾಷ್ಟ್ರಪತಿಗಳ ಭೇಟಿ ಮುಂದಾಗಿದೆ.
ಕೆಆರ್‌ಎಸ್‌ನಲ್ಲಿ ಶನಿವಾರ ಜಿಲ್ಲಾ ರೈತ ಸಂಘ ಹಮ್ಮಿಕೊಂಡಿದ್ದ ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಕಾನೂನು ಅಭಿಯಾನ ಮುಂದಿನ ಕ್ರಮಗಳು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಪಾಲಿಗೆ ಕಣ್ಣು ,ಕಿವಿ ಇಲ್ಲದ ಪ್ರಧಾನ ಮಂತ್ರಿಗಳು ಕಾವೇರಿ ವಿಷಯದಲ್ಲಿ ಇಷ್ಟೊಂದು ಅನ್ಯಾಯವಾಗಿದ್ದರೂ ತುಟಿ ಬಿಚ್ಚಿ ಮಾತನಾಡಿಲ್ಲ. ಹೀಗಾಗಿ ರಾಷ್ಟ್ರಪತಿಗಳಾದರೂ ನಮ್ಮ ರಾಜ್ಯದ ರೈತರ ನೋವಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುತ್ತಾರೆಂಬ ಹೊಸ ಆಶಯದಿಂದೊಂಗೆ ರಾಷ್ಟ್ರಪತಿ ಭೇಟಿ ರೈತ ಸಂಘ ನಿರ್ಧರಿಸಿದೆ.
ಕೆಆರ್‌ಎಸ್ ಜಲಾಶಯದಿಂದ ಪ್ರತಿದಿನ 12 ಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಮಟ್ಟದಿನೇ ದಿನೇ ಕುಸಿಯುತ್ತಿದೆ. ಜತೆಗೆ ರೈತರು ನಾಟಿ ಮಾಡಿರುವ ಬತ್ತದ ಬೆಳೆಗಳಿಗೆ ನೀರು ಒದಗಿಸುವುದು ಸಾಧ್ಯವಿಲ್ಲ. ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಲಿದೆ. ಇಷ್ಟಾದರೂ ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸುವ ಸರ್ಕಾರದ ನಡವಳಿಕೆ ಕುರಿತು ಸಮಗ್ರವಾಗಿ ಸಭೆಯಲ್ಲಿ ಚರ್ಚೆಮಾಡಿದ ನಂತರ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ದಿನಾಂಕ ಸಮಯ ನಿಗದಿ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಪ್ರಧಾನಿ ಮೌನ:
ಪ್ರಧಾನ ಮಂತ್ರಿಗಳು ಎರಡು ರಾಜ್ಯದ ನೀರಿನ ಸಮಸ್ಯೆಗಳ ಕುರಿತಾಗಿ ತಿಳಿದಿದ್ದರೂ ಮೌನವಾಗಿದ್ದಾರೆ. ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾವೇರಿ ನೀರಿನ ಸಂಬಂಧ ಮಧ್ಯ ಪ್ರವೇಶಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ರೈತ ಸಂಘದ ನಿಯೋಗ ಈ ಬಗ್ಗೆ ರಾಷ್ಟ್ರ ಪತಿಗಳನ್ನು ಭೇಟಿ ಮಾಡುವುದರ ಜೊತೆಗೆ ರಾಜ್ಯ ರೈತ ಸಂಘದಿಂದಲೇ ಜಲ ನೀತಿ ಬಗ್ಗೆ ಕಾನೂನು ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಜಲನೀತಿಯಿಂದ ಪರಿಹಾರ ಸಾಧ್ಯ:
ಹಿರಿಯ ವಕೀಲ ವೇಣುಗೋಪಾಲ… ಮಾತನಾಡಿ, ನೀರಿನ ಎರಡು ರಾಜ್ಯಗಳ ಕುರಿತಾದ ಜಲನೀತಿಯ ಸಮಸ್ಯೆ ಬಗೆಹರಿಸಿಕೊಳ್ಳಲು ಸಂವಿಧಾನದಲ್ಲಿ 262 ಆರ್ಟಿಕಲ್ ನಲ್ಲಿ ರೂಪಿಸಿರುವಂತೆ ಸುಪ್ರೀಂ ಕೋರ್ಟ್ ಪ್ರವೇಶ ಮಾಡುವಂತಿಲ್ಲ. ಆಯಾ ಎರಡು ರಾಜ್ಯದವರೇ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು ಅದು ಸಾಧ್ಯವಾಗದಿದ್ದಾಗ ಮಾತ್ರ ಕೋರ್ಟ ಮೂಲಕ ಬಗೆ ಹರಿಸಬಹುದು. ತಮಿಳುನಾಡಿನ ಪ್ರಭಾವಕ್ಕೆ ಮಣಿದು ಕರ್ನಾಟಕವನ್ನು ನೀರಿನ ಸಮಸ್ಯೆಯಲ್ಲಿ ಸಿಲುಕುವಂತೆ ಮಾಡುತ್ತಿದೆ ಎಂದು ವಕೀಲರು ಸಭೆಯಲ್ಲಿ ತಿಳಿಸಿದರು.
ಮೇಲುಕೋಟೆ ಕ್ಷೇತ್ರ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರ ಬೆಳೆ ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳು ಹಾಗೂ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾದ ಸರ್ಕಾರದ ಕ್ರಮಗಳ ಬಗ್ಗೆ ಈ ಸಂವಾದದಿಂದ ವರದಿ ತಯಾರಿಸಿ, ಜಿಲ್ಲಾ ರೈತ ಸಂಘದ ವತಿಯಿಂದ ವಕೀಲರ ಮೂಲಕ ಪಿಟಿಷನ್ ಹಾಕಿ ಕಾನೂನು ಹೋರಾಟಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೂ ತಿಳಿಸಲಾಗುವುದು ಎಂದು ಹೇಳಿದರು.
