ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲೇ ರೈಲ್ವೆ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಆಮೆಗತಿ ಬೆಂಗಳೂರು ಸಿಟಿ, ದಂಡು, ಕೆ.ಆರ್‌.ಪುರ, ಯಶವಂತಪುರದಲ್ಲಿ ಪಿಒಎಸ್‌ ಯಂತ್ರ ಅಳವಡಿಕೆ ಕನಿಷ್ಠ ರಾಜಧಾನಿ ಎಕ್ಸ್‌ಪ್ರೆಸ್‌, ಶತಾಬ್ದಿ ಎಕ್ಸ್‌ಪ್ರೆಸ್‌ ಸೇವೆಗೂ ನಗದು ರಹಿತ ವ್ಯವಹಾರ ಸಾಧ್ಯವಾಗುತ್ತಿಲ್ಲ
ಬೆಂಗಳೂರು: ಹಣ ಕೊಟ್ಟು ರೈಲ್ವೆ ಟಿಕೆಟ್ ಖರೀದಿಸುವ, ಮುಂಗಡ ಟಿಕೆಟ್ ಕಾಯ್ದಿರಿಸುವ ಸೇವೆಯನ್ನು ಸಂಪೂರ್ಣವಾಗಿ ನಗದು ರಹಿತ ಮಾಡುವ ಯೋಜನೆ ರಾಜ್ಯದಲ್ಲಿ ಇನ್ನೂ ಆಮೆಗತಿಯಲ್ಲಿ ಸಾಗಿದೆ. ಯೋಜನೆ ಘೋಷಿಸಿ 6 ತಿಂಗಳು ಮುಗಿಯುತ್ತಾ ಬಂದಿದ್ದರೂ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಶ್ಲೆಸ್ ವ್ಯವಹಾರ ಕುಂಟುತ್ತಲೇ ಸಾಗಿದೆ.
ತಂತ್ರಜ್ಞಾನದ ಬೆಳವಣಿಗೆ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ದಿನಕ್ಕೆ ಲಕ್ಷಾಂತರ ಜನರು ಟಿಕೆಟ್ ಬುಕ್ ಮಾಡುವ ಮೂಲಕ ದಾಖಲೆ ಬರೆದಿದೆ. ಆದರೆ, ರೈಲು ನಿಲ್ದಾಣಗಳಲ್ಲಿ ಮಾತ್ರ ನಗದು ರಹಿತ ವ್ಯವಹಾರ ಮಾಡಲು ಹರಸಾಹಸ ಮಾಡುವ ಸ್ಥಿತಿ ಇದೆ. ಈಗಲೂ ಸಹ ನಿಲ್ದಾಣಗಳಲ್ಲಿ ಸೀಟು ಕಾಯ್ದಿರಿಸುವಿಕೆಯಲ್ಲಿ ಕೇವಲ ಶೇ.20 ಮಾತ್ರ ಕ್ಯಾಶ್ಲೆಸ್ ವ್ಯವಹಾರ ನಡೆಯುತ್ತಿದೆ.
ಬೆಂಗಳೂರು ಕೇಂದ್ರ ರೈಲು ನಿಲ್ದಾಣ, ದಂಡು ರೈಲು ನಿಲ್ದಾಣ, ಕೆ.ಆರ್.ಪುರ, ಯಶವಂತಪುರ, ಬಂಗಾರಪೇಟೆ ನಿಲ್ದಾಣಗಳಲ್ಲಿ ಇದೀಗ ಮೊದಲನೇ ಹಂತದಲ್ಲಿ ಕ್ಯಾಶ್ಲೆಸ್ ವ್ಯವಹಾರ ಆರಂಭಿಸಲಾಗಿದೆ. ಪಿಒಎಸ್ (ಪಾಯಿಂಟ್ ಆಫ್ ಸೇಲ್) ಯಂತ್ರಗಳನ್ನು ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೌಂಟರ್ಗಳಿಗೆ ಒದಗಿಸಿದೆ. ಆದರೆ, ಈ ಕೌಂಟರ್ಗಳಲ್ಲಿ ನಗದು ರಹಿತ ವ್ಯವಹಾರ ಮಾಡಲು ಸಾಕಷ್ಟುಕಾಲಾವಧಿ ಬೇಕಾಗುತ್ತದೆ. ಹಾಗಾಗಿ ಅನಿವಾರ್ಯವಾಗಿ ನಗದು ನೀಡಿ ಬುಕಿಂಗ್ ಮಾಡುವ ಸ್ಥಿತಿ ಇದೆ.
ಕಾದಿರಿಸದ ಟಿಕೆಟ್ಅನ್ನು (ಅನ್ರಿಸರ್ವ್ಡ್ ಟಿಕೆಟ್) ನಗದು ನೀಡದೇ ಕಾರ್ಡ್ ಮೂಲಕ ಪಡೆಯಲು ಕನಿಷ್ಠ 7 ನಿಮಿಷ ಬೇಕಾಗುತ್ತದೆ. ಇದೇ 7 ನಿಮಿಷದಲ್ಲಿ 7 ಜನರಿಗೆ ಟಿಕೆಟ್ ನೀಡಬಹುದು ಎನ್ನುವ ರೈಲ್ವೇ ಅಧಿಕಾರಿಗಳು, ಕನಿಷ್ಠ ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ ಎಕ್ಸ್ಪ್ರೆಸ್ ಸೇವೆಗೂ ನಗದು ರಹಿತ ವ್ಯವಹಾರ ಮಾಡಲು ಆಗುತ್ತಿಲ್ಲ. ಇದಕ್ಕೆ ಸರ್ವರ್ ಸಮಸ್ಯೆ, ಕಾರ್ಡ್ ಸ್ವೀಕೃತಿ ವಿಳಂಬ ಕಾರಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಅಜಗಜಾಂತರ: ನೋಟು ಅಪಮಾನ್ಯ ಮಾಡಿದ ಬಳಿಕ ನಗದು ರಹಿತ ಆರ್ಥಿಕ ವ್ಯವಸ್ಥೆಯತ್ತ ಮುಂದಡಿ ಇಟ್ಟಕೇಂದ್ರ ಸರ್ಕಾರ ಮೊಟ್ಟಮೊದಲಿಗೆ ರೈಲ್ವೇಯನ್ನು ಕ್ಯಾಶ್ಲೆಸ್ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ದೇಶದ 12 ಸಾವಿರ ಟಿಕೆಟ್ ಕೌಂಟರ್ಗಳಲ್ಲೂ ಕಾರ್ಡ್ ಸ್ವೀಕರಿಸುವ ಪಿಒಎಸ್ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು. ದೇಶದ ಕೆಲವೊಂದು ರೈಲ್ವೇ ವಲಯಗಳಲ್ಲಿ ಈ ಕ್ರಮ ಯಶಸ್ವಿಯಾಗಿದೆ. ದೇಶದಲ್ಲಿ ಸುಮಾರು ಶೇ.75 ಮುಂಗಡ ಕಾಯ್ದಿರಿಸಿದ ಟಿಕೆಟ್ಗಳು ನಗದು ರಹಿತವಾಗಿಯೇ ಬುಕ್ಕಿಂಗ್ ಆಗುತ್ತಿದೆ. ಆದರೆ, ಬೆಂಗಳೂರು ಮತ್ತಿತರ 5 ನಿಲ್ದಾಣಗಳಲ್ಲಿ ಈ ಪ್ರಮಾಣ ಮಾತ್ರ ಇನ್ನೂ ಶೇ.20ರಷ್ಟಿದೆ. ಐಟಿ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ ಸಾಕಷ್ಟುಪ್ರಯಾಣಿಕರು ಕ್ಯಾಶ್ಲೆಸ್ ಪ್ರಯಾಣ ನಡೆಸಲು ಉದ್ದೇಶಿಸಿದ್ದರೂ ರೈಲ್ವೇಯಲ್ಲಿ ಮಾತ್ರ ತಾಂತ್ರಿಕ ಸಮಸ್ಯೆ ಇರುವುದರಿಂದ ಇದು ಸಾಧ್ಯವಾಗುತ್ತಿಲ್ಲ.
