ಆತ್ಮ ಕೊಂದ ಉದ್ಯಮಿಗಳು ಹಲವರು: ಸಿದ್ಧಾರ್ಥ ಅವರ ಹಾದಿಯೇ ಹಿಡಿದರು!
ಉದ್ಯಮ ವೈಫಲ್ಯ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆಗೆ ಕಾರಣ? ಸಿದ್ಧಾರ್ಥ ರೀತಿಯಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿಗಳ ಹಲವರು| ಉದ್ಯಮ ವೈಫಲ್ಯ ಹಾಗೂ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳ ಪಟ್ಟಿ|
ಬೆಂಗಳೂರು(ಆ.02): ಉದ್ಯಮದಲ್ಲಿನ ವಿಫಲತೆಯಿಂದಾಗಿ ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಹೆಗೆಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಸಿದ್ಧಾರ್ಥ ಪ್ರಾಣ ಬಿಟ್ಟಿದ್ದಾರೆ.
ಆದರೆ ಹೀಗೆ ಆತ್ಮಹತ್ಯೆಗೆ ಶರಣಾದ ಉದ್ಯಮಿಗಳಲ್ಲಿ ಸಿದ್ಧಾರ್ಥ ಹೆಗಡೆ ಮೊದಲಿಗರೇನಲ್ಲ. ಉದ್ಯಮದಲ್ಲಿನ ನಷ್ಟ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಈ ಹಿಂದೆಯೂ ಹಲವು ಪ್ರತಿಷ್ಠಿತ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.
ತಮ್ಮ ಉದ್ಯಮದಿಂದಲೇ ಖ್ಯಾತಿ ಗಳಿಸಿ, ಕೊನೆಗೆ ಅದೇ ಉದ್ಯಮದ ವಿಫಲತೆಯಿಂದಾಗಿ ಹಾಗೂ ವೈಯಕ್ತಿಕ ಕಾರಣಗಳಿಗಾಗಿಯೂ ಆತ್ಮಹತ್ಯೆಗೆ ಶರಣಾದ ಪ್ರತಿಷ್ಠಿತ ಉದ್ಯಮಿಗಳ ವಿವರ ಇಲ್ಲಿದೆ.
ವಿಜಿ ಸಿದ್ಧಾರ್ಥ ಹೆಗಡೆ:
ಕೆಫೆ ಕಾಫಿ ಡೇ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದ ವಿಜಿ ಸಿದ್ಧಾರ್ಥ ಹೆಗಡೆ, ಕಳೆದ ಜು.30ರಂದು ನಾಪತ್ತೆಯಾಗಿದ್ದರು. ಮಂಗಳೂರಿನ ನೇತ್ರಾವತಿ ನದಿ ಬಳಿ ಕೊನೆಯದಾಗಿ ಅವರು ಕಾಣಿಸಿಕೊಂಡಿದ್ದರು. ಸತತ 38 ಗಂಟೆಗಳ ಕಾರ್ಯಾಚರಣೆ ಬಳಿಕ ಜು.31ರಂದು ಸಿದ್ಧಾರ್ಥ ಅವರ ಮೃತದೇಹ ಪತ್ತೆಯಾಗಿತ್ತು.
ಸಾಲ, ಉದ್ಯಮದಲ್ಲಿನ ನಷ್ಟ ಹಾಗೂ ಐಟಿ ಕಾರ್ಯಾಚರಣೆ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸಾವಿಗೂ ಮುನ್ನವೇ ಅವರು ಬರೆದಿದದ ಪತ್ರದಲ್ಲಿ ಹಲವು ಅಂಶಗಳು ಉಲ್ಲೇಖವಾಗಿರುವುದು ಈ ವಾದಕ್ಕೆ ಪುಷ್ಠಿ ನೀಡುತ್ತದೆ. ಒಟ್ಟಿನಲ್ಲಿ ತಮ್ಮ ಉದ್ಯಮದಿಂದಲೇ ಜನಮನ್ನಣೆ ಗಳಿಸಿದ ಸಿದ್ಧಾರ್ಥ ಅದೇ ಉದ್ಯಮದ ವಿಫಲತೆಯಿಂದಾಗಿ ದುರಂತ ಸಾವು ಕಂಡಿದ್ದು ಮಾತ್ರ ವಿಪರ್ಯಾಸ.
ವಿನೀತ್ ವಿಗ್:
ಎನ್’ಸ್ಕೈಕ್ಲೋಪೀಡಿಯಾ ಬ್ರಿಟಾನಿಕಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಿನೀತ್ ವಿಗ್, 2016ರಲ್ಲಿ ತಮ್ಮ ಅಪಾರ್ಟಮೆಂಟ್’ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಸಾವಿಗೆ ತಾವೇ ಕಾರಣರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯಗೆ ಶರಣಾಗುತ್ತಿರುವುದಾಗಿ ವಿನೀತ್ ಪತ್ರದಲ್ಲಿ ತಿಳಿಸಿದ್ದರು.
ಲಲಿತ್ ಶೇಠ್:
ರಾಜ್ ಟ್ರಾವೆಲ್ಸ್ ಮೂಲಕ ದೇಶಾದ್ಯಂತ ಜನಮನ್ನಣೆ ಗಳಿಸಿದ್ದ ಉದ್ಯಮಿ ಲಲಿತ್ ಶೇಠ್, 2012ರಲ್ಲಿ ಮುಂಬೈನ ಬಾಂದ್ರಾ-ವರ್ಲಿ ಲಿಂಕ್ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣಕಾಸಿನ ತೊಂದರೆಯೇ ಲಲಿತ್ ಶೇಠ್ ಆತ್ಮಹತ್ಯಗೆ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.
ಅಂಗದ್ ಪಾಲ್:
ಸ್ಟೀಲ್ ಉದ್ಯಮದ ದಿಗ್ಗಜ ಸ್ವರಾಜ್ ಪಾಲ್ ಅವರ ಮಗ ಅಂಗದ್ ಪಾಲ್, 2016ರಲ್ಲಿ ಲಂಡನ್’ನಲ್ಲಿರುವ ತಮ್ಮ ಅಪಾರ್ಟಮೆಂಟ್’ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಉದ್ಯಮದ ನಷ್ಟ ಹಾಗೂ ಅದರಿಂದ ಕುಟುಂಬದಲ್ಲಿ ಉಂಟಾದ ಬಿರುಕಿನ ಪರಿಣಾಮ ಅಂಗದ್ ಪಾಲ್ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.
ಸಜನ್ ಪರಯಿಲ್:
ಕೇರಳದ ಕಣ್ಣೂರಿನ 48 ವರ್ಷದ ಉದ್ಯಮಿ ಸಜನ್ ಪರಯಿಲ್, ತಾವು ನೂತನವಾಗಿ ನಿರ್ಮಿಸಿದ್ದ ಆಡಿಟೋರಿಯಂ ಉದ್ಘಾಟನೆಗೆ ಅಂತೂರಿನ ಸ್ಥಳೀಯ ಆಡಳಿತ ನಿರಾಕರಿಸಿದ ಪರಿಣಾಮ ೀ ವರ್ಷದ ಜೂನ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಲಕ್ಕಿ ಗುಪ್ತಾ ಅಗರವಾಲ್:
33 ವರ್ಷದ ಯುವ ಉದ್ಯಮಿ ತಮ್ಮ Kingdom ITES Pvt Ltd ಸ್ಟಾರ್ಟ್ ಅಪ್ ಸಂಸ್ಥೆಯ ವಿಫಲತೆಯ ಪರಿಣಾಮ ನೈಟ್ರೋಜನ್ ಗ್ಯಾಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.