‘ಇವರ ಕಿರುಕುಳದಿಂದಲೇ ಕಾಫಿ ಡೇ ಕಿಂಗ್ ಸಿದ್ಧಾರ್ಥ ಆತ್ಮಹತ್ಯೆ’
ಕಾಫಿ ಡೇ ಸಾಮ್ರಾಜ್ಯದ ದೊರೆ ಮನೆನಾಡಿನ ಮನೆಯ ಹುಡುಗ ಸಿದ್ಧಾರ್ಥ ತಮ್ಮ ಸಾವಿರಾರು ಕೋಟಿ ಸಾಮ್ರಾಜ್ಯ ತೊರೆದು ಹೋಗಿದ್ದಾರೆ. ಇವರ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದು, ಇದೀಗ ಕಿರುಕುಳ ಕಾರಣವೆಂದು ಮುಖಂಡರೋರ್ವರು ಹೇಳಿದ್ದಾರೆ.
ಹುಬ್ಬಳ್ಳಿ [ಆ.01]: ಕೆಫೆ ಕಾಫಿ ಡೇ ಮಾಲಿಕ ವಿ.ಜಿ.ಸಿದ್ಧಾರ್ಥ ಸಾವಿನ ಕುರಿತು ಸಾಕಷ್ಟುಅನುಮಾನಗಳು ಕಾಡಿವೆ. ಸಿದ್ಧಾರ್ಥ ಅವರಿಗೆ ರಾಜಕಾರಣಿಯೊಬ್ಬರು ಕಿರುಕುಳ ನೀಡಿದ್ದಾರೆ. ಆದಕಾರಣ ಸಿದ್ಧಾರ್ಥ ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ. ರಾಜಕಾರಣಿಯೊಬ್ಬರು ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ. ಆದರೆ ಆ ರಾಜಕಾರಣಿ ಹೆಸರನ್ನು ನಾನೀಗ ಬಹಿರಂಗ ಪಡಿಸಲಾರೆ ಎಂದಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾರ್ಕ್ ಫೈಬರ್ ಮತ್ತು ಕೊ-ಲೋಕೆಶನ್ ಸಂಸ್ಥೆಗಳಲ್ಲಿ ಹಗರಣಗಳು ನಡೆದಿವೆ. ಈ ಸಂಸ್ಥೆಗಳ ಮುಖ್ಯಸ್ಥರಾಗಿ ವಿ.ಜಿ.ಸಿದ್ಧಾರ್ಥ ಭಾಗಿಯಾಗಿದ್ದರು. ಸಿಂಗಾಪುರ ಹಾಗೂ ಹಾಂಕಾಂಗ್‌ನಲ್ಲಿ ಅಲ್ಪಾಗ್ರಾಫ್ ಕಂಪನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ವೇ 2 ವೆಲ್ತ್ ಹಾಗೂ ಅಲ್ಪಾ ಗ್ರಾಫ್ ಕಂಪನಿಗಳಿಗೆ ಸಿಂಗಾಪುರ ಹಾಗೂ ಹಾಂಗ್‌ಕಾಂಗ್‌ನಲ್ಲಿರುವ ತನಿಖಾ ಸಂಸ್ಥೆ .14.5 ಕೋಟಿ ಮೊತ್ತದ ದಂಡವನ್ನು ವಿಧಿಸಿದೆ. ಈ ಹಗರಣದಲ್ಲೂ ಸಿದ್ಧಾರ್ಥ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಇದರ ಜತೆಗೆ ರಾಜಕಾರಣಿಯೊಬ್ಬರು ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ. ಆದರೆ ಆ ರಾಜಕಾರಣಿ ಹೆಸರನ್ನು ನಾನೀಗ ಬಹಿರಂಗ ಪಡಿಸಲಾರೆ ಎಂದಿದ್ದಾರೆ.
ಕಾಫಿ ಡೇ ಮಾಲಿಕ ಸಿದ್ಧಾರ್ಥ ಸಾವಿಗೂ ಮುನ್ನ ಬರೆದ ಪತ್ರ ಸತ್ಯವನ್ನು ಮರೆಮಾಚಲು ಮಾಡಿರುವ ಹುನ್ನಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪತ್ರವನ್ನು ಉದ್ದೇಶಪೂರ್ವಕವಾಗಿ ಬರೆದಂತೆ ಕಾಣುತ್ತಿದೆ. ಸರ್ಕಾರ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು. ನ್ಯಾಯಕ್ಕೆ ಅಪಚಾರವಾಗದಂತೆ ತನಿಖಾ ಸಂಸ್ಥೆ ಕಾರ್ಯನಿರ್ವಹಿಸುವ ಮೂಲಕ ಹಗರಣಗಳನ್ನು ಬಹಿರಂಗಪಡಿಸಬೇಕು. ಸಿದ್ಧಾರ್ಥ ಸಾವಿನ ಸತ್ಯವನ್ನು ಹೊರಗೆಳೆಯಬೇಕು ಎಂದು ಆಗ್ರಹಿಸಿದ್ದಾರೆ.