ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿರುದ್ಧ ಫತ್ವಾ | ಇರಾಕ್‌ನ ಶಿಯಾ ಮುಖ್ಯಸ್ಥ ಅಯಾತುಲ್ಲಾ ಸಿಸ್ತನಿ ಫತ್ವಾ | ಇಂಥ ಬೆದರಿಕೆಗಳಿಗೆ ಬಗ್ಗಲ್ಲ ಎಂದು ಸಿಸ್ತನಿ ಫತ್ವಾಕ್ಕೆ ವಾಸಿಂ ರಿಜ್ವಿ
ಲಖನೌ (ಆ. 29): ಉತ್ತರ ಪ್ರದೇಶದ ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತನಗೆ ಸೇರಿದ ಜಮೀನು ಬಿಟ್ಟು ಕೊಡುವುದಾಗಿ ಭಾರತದ ಶಿಯಾ ವಕ್ಫ್ ಮಂಡಳಿ ಘೋಷಣೆ ಮಾಡಿದ ಬೆನ್ನಲ್ಲೇ, ಈ ವಿಚಾರ ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಯೋಧ್ಯೆಯಲ್ಲಿರುವ ವಕ್ಫ್ ಮಂಡಳಿಯ ಯಾವುದೇ ಆಸ್ತಿಯನ್ನು ರಾಮ ಸೇರಿದಂತೆ ಇತರೆ ಯಾವುದೇ ದೇವಸ್ಥಾನದ ನಿರ್ಮಾಣಕ್ಕೆ ನೀಡಲ್ಲ ಎಂದು ಶಿಯಾ ಪಂಥದ ವಿಶ್ವ ಗುರು ಎಂದೇ ಹೇಳಲಾಗುವ ಇರಾಕ್‌ನ ಶಿಯಾ ಮುಖ್ಯಸ್ಥ ಅಯಾತುಲ್ಲಾ ಅಲಿ ಅಲ್-ಸಿಸ್ತನಿ ಫತ್ವಾ ಹೊರಡಿಸಿದ್ದಾರೆ.
ಮಂಗಳವಾರ ಇರಾಕ್‌ನ ನಜಫ್ ಎಂಬಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ, ವಿವಾದಿತ ಅಯೋಧ್ಯೆಯಲ್ಲಿ ರಾಮ ಅಥವಾ ಯಾವುದೇ ಮಂದಿರ ನಿರ್ಮಾಣಕ್ಕೆ ಜಾಗ ನೀಡಲು ಅಸಾಧ್ಯ. ಯಾಕೆಂದರೆ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಶಿಯಾ ಅರಸರು ನಿರ್ಮಾಣ ಮಾಡಿದ್ದು, ವಕ್ಫ್ ಆಸ್ತಿಯು ಸಮುದಾಯಕ್ಕೆ ಸೇರಿದ್ದಾಗಿರುತ್ತದೆ ಎಂದು ಅಲ್ ಸಿಸ್ತನಿ ಅವರು ಉತ್ತರಿಸಿದ್ದಾರೆ.
ಈ ಫತ್ವಾ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಸೀಂ ರಿಜ್ವಿ, ‘ಬಾಬ್ರಿ ಮಸೀದಿ ನಿರ್ಮಾಣದ ಅರ್ಜಿದಾರರಿಗೆ ನೆರವು ನೀಡುವಂತೆ ವಕ್ಫ್ ಮಂಡಳಿ ಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ಬರುತ್ತಿವೆ. ಇದೀಗ ಅಯಾತುಲ್ಲಾ ಸಿಸ್ತನಿ ಅವರ ಫತ್ವಾ ಸಹ, ಒತ್ತಡದ ಭಾಗವೇ ಆಗಿದೆ.
ಆದರೆ, ವಕ್ಫ್ ಮಂಡಳಿ ಭಾರತದ ಸಂವಿಧಾನ ನಿಯಮದ ಪ್ರಕಾರ ಕಾರ್ಯ ನಿರ್ವಹಿಸುತ್ತದೆಯೇ ಹೊರತು, ಉಗ್ರಗಾಮಿಗಳು ಅಥವಾ ಇತರೆ ಯಾವುದೇ ಫತ್ವಾದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಇಡೀ ವಿಶ್ವದ ಮುಸ್ಲಿಂ ಸಮುದಾಯ ನಮ್ಮ ವಿರುದ್ಧವಾದರೂ, ರಾಮ ಮಂದಿರಕ್ಕೆ ಅನುವಾಗುವ ನಮ್ಮ ನಿರ್ಣಯವನ್ನು ನಾವು ಬದಲಾಯಿಸಲ್ಲ,’ ಎಂದು ತಿರುಗೇಟು ನೀಡಿದ್ದಾರೆ.
