ಉತ್ತಮ ಮುಂಗಾರು ಮಳೆ ಸುರಿಯಬಹುದಾದ ನಿರೀಕ್ಷೆಯಿರುವುದರಿಂದ, ತಮಿಳುನಾಡಿನೊಂದಿಗೆ ಕಾವೇರಿ ನೀರು ಸುಗಮ ಹಂಚಿಕೆಯಾಗಲಿದೆ ಎಂಬ ಭರವಸೆಯಿದೆ. ಹೀಗಾಗಿ ಕಬಿನಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಸಿಬ್ಬಂದಿಗೆ ನಿರ್ದೇಶಿಸಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮದುರೈ: ಉತ್ತಮ ಮುಂಗಾರು ಮಳೆ ಸುರಿಯಬಹುದಾದ ನಿರೀಕ್ಷೆಯಿರುವುದರಿಂದ, ತಮಿಳುನಾಡಿನೊಂದಿಗೆ ಕಾವೇರಿ ನೀರು ಸುಗಮ ಹಂಚಿಕೆಯಾಗಲಿದೆ ಎಂಬ ಭರವಸೆಯಿದೆ. ಹೀಗಾಗಿ ಕಬಿನಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಸಿಬ್ಬಂದಿಗೆ ನಿರ್ದೇಶಿಸಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇದೇ ರೀತಿ ಮುಂಗಾರು ಮಳೆ ಮುಂದುವರಿದರೆ, ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಆದೇಶದಂತೆ, ಜೂನ್‌ನಲ್ಲಿ ನಾವು ತಮಿಳುನಾಡಿಗೆ ನೀಡಬೇಕಾದ 10 ಟಿಎಂಸಿ ಪಾಲು ನೀಡಬಹುದು ಎಂದು ತಿಳಿಸಿದರು.

ಕುಮಾರಸ್ವಾಮಿಯವರ ನಿರ್ಧಾರಕ್ಕೆ ನಟ, ಮಕ್ಕಳ್‌ ನೀದಿ ಮೈಯ್ಯಂ ಸಂಸ್ಥಾಪಕ ಕಮಲ್‌ ಹಾಸನ್‌ ಸಂತೋಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯವರ ಜೊತೆ ಮಾತನಾಡಿದೆ. ಕಬಿನಿಯಿಂದ ನೀರು ಬಿಡುಗಡೆಗೆ ನನ್ನ ಸಂತೋಷ ವ್ಯಕ್ತಪಡಿಸಿದ್ದೇನೆ. ಅಂತಿಮವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಾರ್ಯಾರಂಭಿಸಿದರೂ, ಎರಡೂ ರಾಜ್ಯಗಳ ನಡುವಿನ ಒಳ್ಳೆತನ, ಹಲವಾರು ಮುಚ್ಚಲ್ಪಟ್ಟಬಾಗಿಲುಗಳನ್ನು ತೆರೆಯಬಲ್ಲದು ಎಂದು ಕಮಲ್‌ ಟ್ವೀಟ್‌ ಮಾಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕಕ್ಕೆ ಆಗಮಿಸಿ, ಅವರನ್ನು ಭೇಟಿಯಾಗಿ ಕಮಲ್‌ ಅಭಿನಂದನೆ ಸಲ್ಲಿಸಿದ್ದರು. ಕಬಿನಿ ನದಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆಗೆ ನೀರಾವರಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಈ ವರ್ಷ ಉತ್ತಮ ಮಳೆಯಾಗಲಿರುವ ಸಾಧ್ಯತೆ ತುಂಬಾ ಇದೆ.

ಕಬಿನಿಯಿಂದ ನೀರು ಬಿಡುಗಡೆಯಾದಲ್ಲಿ, ಎರಡೂ ರಾಜ್ಯಗಳ ರೈತರಿಗೆ ಲಾಭವಾಗುತ್ತದೆ ಮತ್ತು ಸಂತೋಷವಾಗುತ್ತದೆ. ದೇವರ ದಯೆಯಿಂದ ಉತ್ತಮ ಮಳೆ ಬರುತ್ತಿದೆ ಮತ್ತು ಕಾವೇರಿ ನದಿ ನೀರು ಹಂಚಿಕೆಗೆ ಸುಗಮ ವಾತಾವರಣವಿದೆ. ಕರ್ನಾಟಕದಲ್ಲಿ ನದಿಗಳಿರುವ ಕಡೆ ಉತ್ತಮ ಮಳೆಯಾಗುತ್ತಿದೆ, ಅಣೆಕಟ್ಟುಗಳಿಗೆ ಒಳ್ಳೆಯ ಒಳಹರಿವು ಇದೆ ಎಂದು ಅವರು ಹೇಳಿದ್ದಾರೆ.