ಬೆಂಗಳೂರು, (ಆ.19): ಸಂಪುಟ ರಚನೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕ ಹಾಗೂ ಸಂಸದರಿಗೆ ಬೆಂಗಳೂರಿಗೆ ಬರುವಂತೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ.

ಮಂಗಳವಾರ ಬಿ.ಎಸ್.ಯಡಿಯೂರಪ್ಪ ಸರ್ಕಾರದ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇದರಿಂದ ಎಲ್ಲರೂ ಬೆಂಗಳೂರಿಗೆ ಬರುವಂತೆ ಇಂದು (ಸೋಮವಾರ) ಕರ್ನಾಟಕ ಬಿಜೆಪಿ ಕಚೇರಿಯಿಂದ ಸೂಚನೆ ರವಾನೆಯಾಗಿದೆ.

ಚಾಣಕ್ಯನ ಚಾಣಾಕ್ಷ ನೀತಿ: ರಾಜ್ಯದಲ್ಲಿ ರಚನೆಯಾಗಲಿದೆ ಅಚ್ಚರಿ ಸಂಪುಟ

ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು ಹಾಗೂ ಕೇಂದ್ರ ಸಚಿವರಿಗೆ ಆಹ್ವಾನ ನೀಡಲಾಗಿದೆ. ಇನ್ನು ಕೇಂದ್ರದಿಂದ ಯಾರೆಲ್ಲ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುತ್ತಾರೋ ಎನ್ನುವುದು ಇನ್ನು ಖಚಿತವಾಗಿಲ್ಲ.

ಸುಮಾರು 12ರಿಂದ 15 ನೂತನ ಸಚಿವರು ಮಂಗಳವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಯಾರೆಲ್ಲ ಸಚಿವರಾಗ್ತಾರೆ ಎನ್ನುವುದು ಮಾತ್ರ ಸಸ್ಪೆನ್ಸ್ ಆಗಿಯೇ ಉಳಿದಿದೆ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ವಿನಃ ಯಾರು ಸಚಿವರು ಎನ್ನುವುದನ್ನು ಮಾತ್ರ ಸುಳಿವು ನೀಡಿಲ್ಲ. 

ಕೇಂದ್ರದಲ್ಲಿ ಮೋದಿ ಕ್ಯಾಬಿನೆಟ್ ರಚನೆ ರೀತಿಯಲ್ಲಿಯೇ ರಾಜ್ಯ ಸಂಪುಟ ರಚನೆ ಮಾಡುವುದು ಅಮಿತ್ ಶಾ ಅವರ ಪ್ಲಾನ್ ಆಗಿದೆ. ಹೀಗಾಗಿ  ಬಿಎಸ್‌ವೈ ಪಟ್ಟಿಯನ್ನು ತಡೆದ ಅಮಿತ್ ಶಾ ತಾವೇ ಒಂದು ನೂತನ ಸಚಿವರ ಪಟ್ಟಿಯನ್ನು ತಯಾರು ಮಾಡುತ್ತಿದ್ದು, ಯಾರಿಗೆ ಸಚಿವ ಭಾಗ್ಯ ಒದಗಿಬರಲಿದೆ  ಎನ್ನುವುದು ಇಂದು ರಾತ್ರಿ ತಿಳಿಯಲಿದೆ.

ಮಂಗಳವಾರ ಬೆಳಗ್ಗೆ 10.30 ಕ್ಕೆ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ.