ಪರಮೇಶ್ವರ್‌ ರಾಜಿನಾಮೆಯಿಂದ ತೆರವಾಗಿರುವ ಗೃಹ ಸಚಿವ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಒಟ್ಟು ಮೂರು ಸಚಿವ ಸ್ಥಾನ ಖಾಲಿ ಇದ್ದು, ಅಧಿವೇಶನದ ನಂತರ ಇವು ಭರ್ತಿಯಾಗಲಿವೆ ಎಂದು ಸಿಎಂ ಹೇಳಿದ್ದಾರೆ.

ಮೈಸೂರು: ‘ರಾಜ್ಯ ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ನಾನೇ ತೀರ್ಮಾನಿಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಮೇಶ್ವರ್‌ ರಾಜಿನಾಮೆಯಿಂದ ತೆರವಾಗಿರುವ ಗೃಹ ಸಚಿವ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಒಟ್ಟು ಮೂರು ಸಚಿವ ಸ್ಥಾನ ಖಾಲಿ ಇದ್ದು, ಅಧಿವೇಶನದ ನಂತರ ಇವು ಭರ್ತಿಯಾಗಲಿವೆ ಎಂದರು.

‘ಮುಂಬರುವ ವಿಧಾನಸಭಾ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದ್ದು ಒಬ್ಬರಿಗೆ ಒಂದೇ ಹುದ್ದೆ ಎಂದು ಪಕ್ಷದ ಹೈಕಮಾಂಡ್‌ ಹೇಳಿದೆ. ಹಾಗಾಗಿ ಚುನಾವಣೆಯ ನೇತೃತ್ವ ಮಾತ್ರ ನನ್ನದು, ಮುಖ್ಯಮಂತ್ರಿ ಯಾರಾಗ ಬೇಕೆಂಬುದು ಚುನಾವಣೆ ಬಳಿಕ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ' ಎಂದರು.

ರಾಜ್ಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿರುವ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದರು.