ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾಗಲಿದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದರು.

ಬೆಳಗಾವಿ (ಮೇ.28): ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾಗಲಿದೆ. ಪಕ್ಷ ಅಧಃಪತನದ ದಾರಿಗೆ ಹೋಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ಚುನಾವಣೆಯಲ್ಲಿ 40 ಸ್ಥಾನಗಳನ್ನೂ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗದು. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಚುನಾವಣೆಗೆ ಹೋಗಬೇಕಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿದ್ದರಾಮಯ್ಯ ಕುರುಬ ಸಮುದಾಯದ ದೊಡ್ಡ ನಾಯಕರು, ರಾಜ್ಯದ ಮಾಸ್ ಲೀಡರ್. ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದಾಗ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗಿತ್ತು. ಇಂದು ಅದೇ ರೀತಿಯ ಅನ್ಯಾಯ ಕುರುಬ ಸಮುದಾಯಕ್ಕೆ ಆಗಿದೆ ಎಂದು ದೂರಿದರು. ಕಾಂಗ್ರೆಸ್‌ ಪಕ್ಷದ ನಾಯಕರಾದ ವೇಣುಗೋಪಾಲ ಹಾಗೂ ಸುರ್ಜೇವಾಲಾಗೆ ಕನ್ನಡ ಗೊತ್ತಿಲ್ಲ, ರಾಜ್ಯದ ಸಮಸ್ಯೆಗಳ ಅರಿವೂ ಇಲ್ಲ. ಬೆಂಗಳೂರನ್ನು ಬಿಟ್ಟರೇ ಬೇರೆ ಊರುಗಳ ಸ್ಥಿತಿ ಅವರಿಗೆ ತಿಳಿದಿಲ್ಲ. ಆದರೂ ರಾಜ್ಯದ ನಾಯಕತ್ವದ ಬಗ್ಗೆ ತೀರ್ಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ 3 ವರ್ಷಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಯಾರಿಗೂ ತೊಂದರೆ ಆಗದಂತೆ ಸಿದ್ದರಾಮಯ್ಯ ಸಮರ್ಥವಾಗಿ ನಿರ್ವಹಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಅವರ ನಾಯಕತ್ವದಿಂದಲೇ ಜಾರಿಯಾಗಲು ಸಾಧ್ಯವಾಯಿತು. ಈಗ ಅವರನ್ನೇ ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಬಹುದು. ಸರ್ಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗಬಹುದು ಎಂದು ತಿಳಿಸಿದರು.

ಜ್ವಾಲಾಮುಖಿಯಂತೆ ಸ್ಫೋಟ

ಡಿ.ಕೆ.ಶಿವಕುಮಾರ್ ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದಾರೆ. ಹಿರಿಯ ನಾಯಕರಿಗೂ ಸಚಿವ ಸ್ಥಾನಗಳಿವೆ. ಹೀಗಿರುವಾಗ ಹೈಕಮಾಂಡ್ ಜೇನುಗೂಡಿಗೆ ಕೈ ಹಾಕಿದಂತಾಗಿದೆ. ಯಡಿಯೂರಪ್ಪರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ ಬಳಿಕ ಬಿಜೆಪಿಯ ಪರಿಸ್ಥಿತಿ ಏನಾಯಿತು ಎಂಬುವುದು ಎಲ್ಲರಿಗೂ ಗೊತ್ತು. ಈಗ ಕಾಂಗ್ರೆಸ್ ಕೂಡ ಅದೇ ತಪ್ಪು ಮಾಡುತ್ತಿದೆ. ಸಿದ್ದರಾಮಯ್ಯ ಅವರ ಕಣ್ಣೀರು 2028ರಲ್ಲಿ ಜ್ವಾಲಾಮುಖಿಯಂತೆ ಸ್ಫೋಟವಾಗಲಿದೆ. ಅಹಿಂದ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.