ಬೆಂಗಳೂರು :  ಬಿಎಸ್‌ಎನ್‌ಎಲ್‌ಗೆ 4ಜಿ ತರಂಗ ಗುಚ್ಛ ಹಂಚಿಕೆ, ಪಿಂಚಣಿ ಪಾವತಿಯಲ್ಲಿ ಸೂಕ್ತ ಪದ್ಧತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ಫೆ.18ರಿಂದ ಮೂರು ದಿನಗಳ ಮುಷ್ಕರ ನಡೆಸಲು ಬಿಎಸ್‌ಎನ್‌ಎಲ್ ನೌಕರರ ಸಂಘಟನೆ ನಿರ್ಧರಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಎ.ಸಿ.ಕೃಷ್ಣ ರೆಡ್ಡಿ ಮುಷ್ಕರದ ದಿನದಂದು ಬಿಎಸ್‌ಎನ್‌ಎಲ್‌ನ ಎಲ್ಲ ಕಚೇರಿಗಳಲ್ಲಿ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.

ರಿಲಯನ್ಸ್‌ ಜಿಯೋ ಕಂಪನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. 4ಜಿ ಸೇವೆ ಒದಗಿಸಲು ತರಂಗ ಗುಚ್ಛಗಳನ್ನು ಬಿಎಸ್‌ಎನ್‌ಎಲ್ ಗೆ ನೀಡುವಂತೆಯೂ ಒತ್ತಾಯಿಸಲಾಗುವುದು. ಜಿಯೋದ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಈಗಾಗಲೇ ರಿಲಯನ್ಸ್‌ ಕಮ್ಯುನಿಕೇಶನ್ಸ್‌ ಟೆಲಿಕಾಂ ಸಂಸ್ಥೆ ತನ್ನ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿವೆ. ಬಿಎಸ್‌ಎನ್‌ಎಲ್ ಸೇರಿದಂತೆ ಇತರ ಸ್ಪರ್ಧಿಗಳನ್ನು ಕಣದಿಂದ ಹೊರತಳ್ಳುವುದೇ ಜಿಯೋ ಹುನ್ನಾರವಾಗಿದ್ದು, ಇದಕ್ಕೆ ಸರ್ಕಾರ ಕೂಡ ಪರೋಕ್ಷ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.

2011-12ನೇ ಸಾಲಿನಲ್ಲಿ 8,800 ಕೋಟಿ ರು. ನಷ್ಟದಲ್ಲಿದ್ದ ಬಿಎಸ್‌ಎನ್‌ಎಲ್‌, 2014-15ನೇ ಸಾಲಿನಲ್ಲಿ 672 ಕೋಟಿ ರು. ಲಾಭ ಗಳಿಸಿದೆ. ಕೇವಲ 2ಜಿ, 3ಜಿ ಮೂಲಕವೇ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ ಎಂದು ಅವರು ಹೇಳಿದರು.