ಬೆಂಗಳೂರು [ಆ.16]:  ರಾಜ್ಯದಲ್ಲಿ ನೆರೆ ಹಾವಳಿ ಉಂಟಾಗಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಗೆ ಸಮಯ ನಿಗದಿ ಮಾಡುವ ಮುಹೂರ್ತ ಒದಗಿಬಂದಿದ್ದು, ಹೈಕಮಾಂಡ್‌ನೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ರಾತ್ರಿ ದೆಹಲಿಗೆ ತೆರಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಮಯ ನೀಡಿದ್ದು, ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿರುವ ನಷ್ಟದ ಅಂದಾಜಿನ ಪ್ರಮಾಣದ ಬಗ್ಗೆ ಪ್ರಧಾನಿಗೆ ಯಡಿಯೂರಪ್ಪ ಅವರು ಮಾಹಿತಿ ನೀಡಿ ಪರಿಹಾರಕ್ಕೆ ಮನವಿ ಮಾಡಲಿದ್ದಾರೆ. ಇದರ ಜತೆಗೆ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಬಲ್ ನಿರೀಕ್ಷೆಯೊಂದಿಗೆ ದೆಹಲಿಗೆ BSY, ಅಮಿತ್ ಶಾ ಬಳಿಯಿದೆ ಮತ್ತೊಂದು ಪಟ್ಟಿ!

ಹೈಕಮಾಂಡ್‌ ಸೂತ್ರದಂತೆ ಸಂಪುಟದ ಗಾತ್ರವು ಸಿದ್ಧವಾಗಲಿದೆ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪ್ರಮುಖ ಪಾತ್ರ ವಹಿಸಿರುವ ಅನರ್ಹಗೊಂಡ ಶಾಸಕರನ್ನು ಬಿಟ್ಟು ಬಿಜೆಪಿಯ ಶಾಸಕರಿಗೆ ಮಾತ್ರ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗಲಿದೆ. ಅನರ್ಹಗೊಂಡಿರುವ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇನ್ನೂ ಕೈಗೆತ್ತಿಗೊಂಡಿಲ್ಲ. ವಿಚಾರಣೆ ತಡವಾಗುವ ಸಾಧ್ಯವಾಗುವ ಇರುವ ಕಾರಣ ಮೊದಲ ಹಂತದಲ್ಲಿ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. 15 ಮಂದಿಗೆ ಸಚಿವ ಸ್ಥಾನ ಲಭ್ಯವಾಗುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ನ ಮುಂದಿನ ನಡೆಯನ್ನು ಗಮನಿಸಿಕೊಂಡು ಎರಡನೇ ಹಂತದಲ್ಲಿ ಅನರ್ಹಗೊಂಡಿರುವ ಶಾಸಕರಿಗೆ ಸಚಿವ ಸ್ಥಾನ ನೀಡಲು ಪಕ್ಷದಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಭಾವ್ಯರು:

ಜಾತಿ, ಪ್ರಾದೇಶಿಕತೆ, ಪಕ್ಷಕ್ಕೆ ದುಡಿದವರು ಸೇರಿದಂತೆ ಇತರೆ ಮಾನದಂಡಗಳ ಆಧಾರದ ಮೇಲೆ ಸಚಿವ ಸ್ಥಾನ ಸಿಗಲಿದೆ. ಪಕ್ಷದ ಮುಖಂಡರಾದ ಗೋವಿಂದ ಕಾರಜೋಳ, ಆರ್‌.ಅಶೋಕ್‌, ಕೆ.ಎಸ್‌. ಈಶ್ವರಪ್ಪ, ಅರವಿಂದ ಲಿಂಬಾವಳಿ, ಜೆ.ಸಿ.ಮಾಧುಸ್ವಾಮಿ, ಶ್ರೀರಾಮುಲು, ಸಿ.ಟಿ.ರವಿ, ಶಶಿಕಲ್ಲಾ ಜೊಲ್ಲೆ, ಕೆ.ಜಿ.ಬೋಪಯ್ಯ, ನೆಹರು ಓಲೆಕಾರ್‌, ಕಳಕಪ್ಪ ಬಂಡಿ, ಶಿವನಗೌಡ ನಾಯಕ, ಉಮೇಶ್‌ ಕತ್ತಿ, ರಾಜುಗೌಡ ಸೇರಿದಂತೆ 15 ಶಾಸಕರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಭಾಗ್ಯ ದೊರಕಲಿದೆ ಎಂದು ಹೇಳಲಾಗಿದೆ.

2 ದಿನಗಳ ಕಾಲ ನವದೆಹಲಿಯಲ್ಲಿರುವ ಯಡಿಯೂರಪ್ಪ ಸಚಿವ ಸಂಪುಟದ ಸಂಭಾವ್ಯಪಟ್ಟಿಯನ್ನು ಅಂತಿಮಗೊಳಿಸಿ ಹಿಂತಿರುಗಲಿದ್ದಾರೆ. ಸಂಭಾವ್ಯಪಟ್ಟಿಗೆ ಪಕ್ಷದ ವರಿಷ್ಠರು ಹಸಿರು ನಿಶಾನೆ ನೀಡುತ್ತಿದ್ದಂತೆ ಸಂಪುಟ ರಚನೆ ಮಾಡಲಿದ್ದಾರೆ. ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ರಚನೆಯಾಗಲಿದೆ ಎನ್ನಲಾಗಿದೆ.

ಇನ್ನು, ದೆಹಲಿಗೆ ಪ್ರಯಾಣ ಬೆಳೆಸಿರುವ ಯಡಿಯೂರಪ್ಪ ಶುಕ್ರವಾರ ಪ್ರಧಾನಿಯವರನ್ನು ಭೇಟಿ ಮಾಡಿ, ಪ್ರವಾಹದಿಂದಾಗಿ ಬೀದಿಗೆ ಬಿದ್ದಿರುವ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಮಧ್ಯಂತರ ಪರಿಹಾರವಾಗಿ ಮೂರು ಸಾವಿರ ಕೋಟಿ ರು. ನೀಡುವಂತೆ ಕೋರಲಿದ್ದಾರೆ. ಕೇಂದ್ರ ಸಚಿವರಾದ ಅಮಿತ್‌ ಶಾ ಮತ್ತು ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಕ್ಕೆ ಆಗಮಿಸಿ ಉತ್ತರ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಅವಲೋಕಿಸಿದ್ದಾರೆ. ಅಲ್ಲದೇ, ರಾಜ್ಯದ ಇತರೆ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರವಾಹದಿಂದಾದ ನಷ್ಟದ ಅಂದಾಜು ಸಿಕ್ಕಂತಾಗಿದೆ. ಈ ಎಲ್ಲದರ ಬಗ್ಗೆಯೂ ಯಡಿಯೂರಪ್ಪ ಅವರು ಪ್ರಧಾನಿಗೆ ಮಾಹಿತಿ ಒದಗಿಸಲಿದ್ದಾರೆ ಎನ್ನಲಾಗಿದೆ.

ಆ.18/19ಕ್ಕೆ ಸಚಿವರ ಪ್ರಮಾಣವಚನ?

ಸಂಭಾವ್ಯ ಸಚಿವರು

* ಆರ್‌.ಅಶೋಕ್‌

* ಕೆ.ಎಸ್‌.ಈಶ್ವರಪ್ಪ

* ಗೋವಿಂದ ಕಾರಜೋಳ

* ಅರವಿಂದ ಲಿಂಬಾವಳಿ

* ಜೆ.ಸಿ.ಮಾಧುಸ್ವಾಮಿ

* ಸುನೀಲ್‌ ಕುಮಾರ್‌

* ಶ್ರೀರಾಮುಲು

* ಉಮೇಶ್‌ ಕತ್ತಿ

* ಸಿ.ಟಿ.ರವಿ

* ಎಸ್‌. ಅಂಗಾರ

* ಶಶಿಕಲಾ ಜೊಲ್ಲೆ

* ಕೆ.ಜಿ. ಬೋಪಯ್ಯ

* ನೆಹರು ಓಲೇಕಾರ್‌

* ಕಳಕಪ್ಪ ಬಂಡಿ

* ಕೆ. ಶಿವನಗೌಡ ನಾಯಕ

* ದತ್ತಾತ್ರೇಯ ಪಾಟೀಲ್‌

* ರಾಜುಗೌಡ