ಬೆಂಗಳೂರು[ಆ. 15] ಸಿಎಂ ಬಿಎಸ್ ಯಡಿಯೂರಪ್ಪ ಮೂರು ದಿನದ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ಇದರೊಂದಿಗೆ ಒಂದು ಕಡೆ ಜನರಲ್ಲಿ ಪರಿಹಾರದ ನಿರೀಕ್ಷೆ ಮೂಡಿದ್ದರೆ ಇನ್ನೊಂದು ಕಡೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿಯೂ ನಿರೀಕ್ಷೆಯ ಭಾರ ಹೆಚ್ಚಾಗಿದೆ.

ಸರಕಾರ ರಚನೆಯಾಗಿ 20 ದಿನಗಳೆ ಕಳೆದಿದ್ದರೂ ಒಂದೆಲ್ಲಾ ಒಂದು ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕಿಕೊಂಡೇ ಬರಲಾಗುತ್ತಿತ್ತು. ಈಗ ಪ್ರವಾಹ ಪರಿಸ್ಥಿತಿಯೂ ಸ್ವಲ್ಪ ಇಳಿದಿದ್ದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ  ಹೈಕಮಾಂಡ್ ಜತೆ ಬಿಎಸ್‌ವೈ ಚರ್ಚೆ ಮಾಡಲಿದ್ದಾರೆ.  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ  ಶುಕ್ರವಾರ ಮಾತುಕತೆ ನಡೆಸಲಿದ್ದಾರೆ. ಇದಾದ ಮೇಲೆ ಪ್ರಧಾನಿ  ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.

ಹೊಸ ಬೆಳವಣಿಗೆ, ಎ. ಮಂಜು-ವಿಶ್ವನಾಥ್ ಭೇಟಿ, ಹುಣಸೂರಿಗೆ ಅಭ್ಯರ್ಥಿ ಫಿಕ್ಸ್?

 ಪ್ರಧಾನಿ ಶುಕ್ರವಾರ 10 ಗಂಟೆಗೆ ಸಮಯ ಕೊಟ್ಟಿದ್ದಾರೆ. ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಅವರನ್ನು ಭೇಟಿ ಮಾಡುತ್ತೇನೆ . ಜೊತೆಗೆ ಹಲವಾರು ಯೋಜನೆಗಳಿಗೆ ಮುಂಜೂರಾತಿಯನ್ನು ಪಡೆದುಕೊಳ್ಳುವುದಿದೆ. ಜೊತೆಗೆ ಸಂಪುಟ ರಚನೆಗೆ ಸಂಬಂಧಿಸಿದಂತ್ತೆ ಅಮಿತ್ ಶಾ ಅವರನ್ನು ಭೇಟಿ ಆಗುತ್ತೇನೆ. ಶುಕ್ರವಾರ ಆಗದಿದ್ದರೆ ಶನಿವಾರ  ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಸಿಎಂ ಬಿಎಸ್‌ವೈ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಿಳಿಸಿದರು.

ರಾಜ್ಯದ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಅಮಿತ್ ಶಾ ಆಗಮಿಸಿದ್ದರು. ಆ ವೇಳೆಯೇ ಮೊದಲ ಹಂತದ 15 ಸಚಿವರ ಪಟ್ಟಿ ಫೈನಲ್ ಆಗಿದೆ ಎನ್ನಲಾಗಿದೆ . ಹಿರಿತನ ಮತ್ತು ಪಕ್ಷ ನಿಷ್ಠೆ ಮೇಲೆ ಸಚಿವ ಸ್ಥಾನ ನೀಡಲಾಗುತ್ತಿದ್ದು ಲಾಬಿ, ಅವರಿಗೆ ಆಪ್ತ, ಇವರಿಗೆ ಆಪ್ತ ಎನ್ನುವುದನ್ನು ಹೈಕಮಾಂಡ್ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಮಾತಿದೆ.

ಶಾಸಕರಲ್ಲದವರೂ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರನ್ನು ಮಣಿಸಲು ಕಾರಣರಾದವರು ತಮಗೆ ಸ್ಥಾನ ನೀಡಬೇಕು ಎಂಬ ಪಟ್ಟು ಇಟ್ಟಿದ್ದಾರೆ ಎನ್ನಲಾಗಿದೆ.