Asianet Suvarna News Asianet Suvarna News

ಮೈತ್ರಿ ಸರ್ಕಾರಕ್ಕೆ ಶಾಕ್: 20 ಶಾಸಕರ ಬಂಡಾಯ?

ಸಿಎಂ ಕುಮಾರಸ್ವಾಮಿಯನ್ನು ಒಪ್ಪಿಕೊಳ್ಳದ 20 ಶಾಸಕರು ಹೊರಬರಲಿದ್ದಾರೆ| ಈ ಬಾರಿ ಬಿಜೆಪಿ ಶೇ.15-20ರಷ್ಟುಹೆಚ್ಚು ಮತಗಳನ್ನು ಪಡೆದುಕೊಳ್ಳಲಿದೆ| ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ 5 ವರ್ಷಗಳಷ್ಟುಹಿಂದಕ್ಕೆ ಹೋಗಿದೆ

BS yeddyurappa Says after may 20th coalition govt will collapse
Author
Bangalore, First Published Apr 12, 2019, 7:53 AM IST

 

 ಚಿಕ್ಕಮಗಳೂರು[ಏ.12]: ಅಪ್ಪ, ಮಕ್ಕಳಿಗೆ ಮಂಡ್ಯ, ಹಾಸನ, ತುಮಕೂರು ಲೋಕಸಭಾ ಕ್ಷೇತ್ರಗಳ ಚುನಾವಣೆಯ ಚಿಂತೆ. ಇವರನ್ನು ಮನೆಗೆ ಕಳುಹಿಸುತ್ತೇವೆ. ಚುನಾವಣಾ ಫಲಿತಾಂಶ ಹೊರ ಬರುತ್ತಿದ್ದಂತೆ ಮೈತ್ರಿ ಸರ್ಕಾರದ ಚಿತ್ರಣ ಸಂಪೂರ್ಣ ಬದಲಾಗಿ ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭವಿಷ್ಯ ನುಡಿದರು.

ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ 5 ವರ್ಷಗಳಷ್ಟುಹಿಂದಕ್ಕೆ ಹೋಗಿದೆ. ರಾಜ್ಯದ ಅಭಿವೃದ್ಧಿ ಕಡೆ ಮೈತ್ರಿ ಸರ್ಕಾರ ಗಮನಹರಿಸುತ್ತಿಲ್ಲ. ಈ ಎಲ್ಲದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಎಸ್‌ವೈ ಹೇಳಿದರು.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯತೆಯನ್ನು ಕಂಡಿರುವ ಜನ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಈ ದೇಶದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ, ಸಿಎಂ ಅವರನ್ನು ಒಪ್ಪಿಕೊಳ್ಳದ ಮೈತ್ರಿಪಕ್ಷಗಳ 20 ಶಾಸಕರು ಹೊರಬರಲಿದ್ದಾರೆ. ಆಗ ಸಮಸ್ಯೆ ಇನ್ನಷ್ಟುಉಲ್ಬಣಗೊಂಡು ಸರ್ಕಾರ ಪತನವಾಗುತ್ತದೆ ಎಂದು ಪುನರುಚ್ಚರಿಸಿದರು.

ಎಚ್‌.ಡಿ. ದೇವೇಗೌಡರು ಮತ್ತು ಸಿದ್ದರಾಮಯ್ಯ ಒಟ್ಟಾಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಆ ಎರಡು ಪಕ್ಷಗಳ ಮುಖಂಡರು ಒಂದಾಗಿದ್ದಾರೆ. ಆದರೆ, ಸಾಮಾನ್ಯ ಕಾರ್ಯಕರ್ತರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಆರೋಪಿಸಿದರು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಡೆದಿರುವ ಮತಗಳಿಗಿಂತ ಈ ಬಾರಿ ಬಿಜೆಪಿ ಶೇ.15-20ರಷ್ಟುಹೆಚ್ಚು ಮತಗಳನ್ನು ಪಡೆದುಕೊಳ್ಳಲಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದರು.

ಸಹಕಾರ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ .6,900 ಕೋಟಿ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಅವರು ಅಧಿಕಾರಕ್ಕೆ ಬಂದು 9 ತಿಂಗಳಾಗಿವೆ. ಈವರೆಗೆ ನಾಲ್ಕೂವರೆ ಸಾವಿರ ಕೋಟಿ ಮಾತ್ರ ಸಾಲ ಮನ್ನಾ ಆಗಿದೆ. ಸಾಲ ಮನ್ನಾದ ಸತ್ಯಾಂಶವನ್ನು ಒಪ್ಪಿಕೊಳ್ಳಲು ಸಿಎಂ ಸಿದ್ದರಿಲ್ಲ, ಈ ವಿಷಯದಲ್ಲಿ ಪ್ರಧಾನಿಯನ್ನು ಟೀಕಿಸುವ ಹಂತಕ್ಕೆ ಅವರು ಹೋಗಿದ್ದಾರೆ ಎಂದು ಹೇಳಿದರು.

‘ಸಿಎಂ ಕ್ಷಮೆ ಕೇಳಬೇಕು’

ನಿಮ್ಮ ಮೇಲೆ ದಾಳಿ ನಡೆದರೆ ನಾವು ಜವಾಬ್ದಾರರಲ್ಲ ಎಂದು ಮೈಸೂರಿನ ಕೆಆರ್‌ಎಸ್‌ ಬಳಿ ಹೇಳುವ ಮೂಲಕ ಕುಮಾರಸ್ವಾಮಿ ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ. ಇದು, ಖಂಡನೀಯ, ಅವರು ಕ್ಷಮಾಪಣೆ ಕೇಳಬೇಕು ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕೇಂದ್ರ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇದರ ಆಧಾರದ ಮೇಲೆ ವೋಟ್‌ ಕೇಳುತ್ತಿದ್ದೇವೆಂದ ಅವರು, ಹಿಂದಿನ 10 ವರ್ಷ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದರು. ಅವರ ಹೆಸರಿನಲ್ಲಿ ಕಾಂಗ್ರೆಸ್ಸಿನವರು ಏಕೆ ಮತ ಕೇಳಲಿಲ್ಲ. ಮೋದಿ ಉತ್ತಮ, ದಕ್ಷ ಆಡಳಿತ ನಡೆಸಿದ್ದಾರೆ. ಆದ್ದÜರಿಂದ ಅವರ ಹೆಸರಲ್ಲಿ ಮತ ಕೇಳುತ್ತಿದ್ದೇವೆಂದು ಹೇಳಿದರು.

ಈ ದೇಶದಲ್ಲಿ ದಲಿತರಿಗೆ, ಹಿಂದುಳಿದ ವರ್ಗದವರಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಪ್ರಧಾನಿ ಮೋದಿ ಹಿಂದುಳಿದ ವರ್ಗಕ್ಕೆ ಸೇರಿದವರು. ಈ ವಿಷಯ ಟೀಕೆ ಮಾಡುವವರಿಗೆ ಗೊತ್ತಿಲ್ಲವಾ? ವಾಜಪೇಯಿ ಪ್ರಧಾನಿ ಆಗಿದ್ದಾಗ, ಡಾ. ಕಲಾಂ ರಾಷ್ಟ್ರಪತಿಯಾಗಿದ್ದರು. ಮೋದಿ ಪ್ರಧಾನಿ ಆಗಿದ್ದ ಕಾಲದಲ್ಲಿ ಪರಿಶಿಷ್ಟಜಾತಿಗೆ ಸೇರಿದವರನ್ನು ರಾಷ್ಟ್ರಪತಿ ಮಾಡಿಲ್ಲವಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ, ಲೂಟಿ, ಹಗಲು ದರೋಡೆ ನಡೆಯುತ್ತಿದೆ. ಈ ಸರ್ಕಾರದ ಅಭಿವೃದ್ಧಿ ಶೂನ್ಯ. ಇದು, ದಪ್ಪ ಚರ್ಮದ ಸರ್ಕಾರ. ಪುಲ್ವಾಮಾ ದಾಳಿಯ ಬಗ್ಗೆ ಕಳೆದ 2 ವರ್ಷದ ಹಿಂದೆಯೇ ಗೊತ್ತಿತ್ತು ಎಂದು ಸಿಎಂ ಹೇಳಿದ್ದಾರೆ. ಈ ವಿಷಯ ಮುಚ್ಚಿಟ್ಟಿರುವುದು ದೇಶದ್ರೋಹದ ಕೆಲಸ. ಅವರು ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪ್ರಧಾನಿ ಅಥವಾ ರಾಷ್ಟ್ರಪತಿಗೆ ತಿಳಿಸುವ ಕೆಲಸ ಮಾಡಬೇಕಾಗಿತ್ತು ಎಂದರು.

ಹಗುರ ಮಾತು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹಾಗೂ ಸಿನಿಮಾ ನಟರ ಬಗ್ಗೆ ಮೈತ್ರಿ ಪಕ್ಷಗಳು ಹಗುರವಾಗಿ ಮಾತನಾಡುತ್ತಿವೆ. ಪ್ರಚಾರದ ವೇಳೆಯಲ್ಲಿ ಹಲ್ಲೆಯನ್ನು ನಡೆಸಲು ಸಹಕಾರ ನೀಡುತ್ತಿವೆ. ಈ ಕ್ಷೇತ್ರದಲ್ಲಿ ಸುಮಲತಾ ಗೆಲುವು ನಿಶ್ಚಿತ ಎಂದರು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ ಯಡಿಯೂರಪ್ಪ, ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಶಾಸಕರಾದ ಸಿ.ಟಿ. ರವಿ, ಬೆಳ್ಳಿ ಪ್ರಕಾಶ್‌, ವಿಧಾನಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಹಾಗೂ ಜಿಪಂ ಸದಸ್ಯ ಸೋಮಶೇಖರ್‌ ಇದ್ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios