ಫೋಟೋ ಕೃಪೆ-ಸಿದ್ದು ಪುಂಡಿಕಲ್

ಬೆಂಗಳೂರು(ಆ.17): ‘ಗುರು ಗೋವಿಂದ ದೋಹೂ ಖಡೆ, ಕಾಕೆ ಲಾಗೂ ಪಾಯೆ..ಬಲಿಹಾರಿ ಗುರು ಆಪ್ನೇ ಗೋವಿಂದ ದಿಯೋ ಬತಾಯೇ..’ ಭಾರತದ ಗುರು ಪರಂಪರೆಯ ಮಹತ್ವ ಸಾರಲು ಕಬೀರ್ ದಾಸರ ಈ ಅಮೃತವಾಣಿಯೇ ಸಾಕು.

ತನ್ನ ಜ್ಞಾನದಿಂದಲೇ ಶಿಷ್ಯನನ್ನು ಕೆತ್ತುವ ಗುರಿವಿಗೆ ಭಾರತದಲ್ಲಿ ಅಪಾರ ಗೌರವ. ಇಂತಹ ಗುರು ಶಿಷ್ಯರ ಬಲದಿಂದಲೇ ಭಾರತ ಇಂದು ವಿಶ್ವಗುರು ಎನಿಸಿಕೊಂಡಿರುವುದು. ಕಾಲಕಾಲಕ್ಕೆ ಭಾರತವನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ ಅನೇಕ ಗುರು ಶಿಷ್ಯರ ಪಟ್ಟಿಯೇ ಇದೆ. ಅದರಲ್ಲಿ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಜೋಡಿ ಪ್ರಮುಖವಾದದ್ದು.

ಅಂದು ನರೇಂದ್ರನಲ್ಲೋರ್ವ ವಿವೇಕಾನಂದರನ್ನು ಸೃಷ್ಟಿಸಿ ಜಗತ್ತಿಗೆ ಧರ್ಮ ಬೋಧನೆ ಮಾಡಿದ ರಾಮಕೃಷ್ಣ ಪರಮಹಂಸರು, ಧರ್ಮ ಭಾರತದ ಆತ್ಮ ಎಂದು ವಿಶ್ವಕ್ಕೆ ಮನದಟ್ಟು ಮಾಡಿಸಿದ್ದರು. ಅದರಂತೆ ಆಧುನಿಕ ಭಾರತದ ರಾಜಕೀಯ ರಂಗದಲ್ಲೂ ಇಂತಹ ಅಪರೂಪದ ಗುರು ಶಿಷ್ಯರ ಜೋಡಿಯೊಂದು ವಿಶ್ವ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಎಲ್ಲರಿಗೂ ಗೊತ್ತಿರುವಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಗುರು ಶಿಷ್ಯರ ಸಂಬಂಧವೇ ಇರುವುದು. ಅಟಲ್ ಗರಡಿಯಲ್ಲಿ ಪಳಗಿದ ರಾಜಕೀಯ ನಾಯಕರ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರು.

ರಾಜಕಾರಣದ ಆಳ, ಅಗಲಗಳನ್ನು ಅಟಲ್ ಮಾರ್ಗದರ್ಶನದಲ್ಲಿ ಪಡೆದ ನರೇಂದ್ರ ಮೋದಿ, ಇಂದು ದೇಶವನ್ನು ಮತ್ತೆ ವಿಶ್ವ ಭೂಪಟದಲ್ಲಿ ರಾರಾಜಿಸಲು ಪಣ ತೊಟ್ಟಿದ್ದಾರೆ. ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಭಾರತ ಮತ್ತೆ ವಿಶ್ವಗುರುವಾಗುವತ್ತ ಬಿರುಸಿನ ಹೆಜ್ಜೆ ಇರಿಸಿದೆ.

ಅಂದು ವಿವೇಕಾನಂದರನ್ನು ಸೃಷ್ಟಿಸಿದ್ದ ರಾಮಕೃಷ್ಣ ಪರಮಹಂಸರಿಗೂ, ಇಂದು ಮೋದಿ ಅವರನ್ನು ತಿದ್ದಿ ತೀಡಿದ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಹೊಸ ಸಂಬಂಧವೊಂದು ಬೆಸೆದುಕೊಂಡಿದೆ. ಅದೆನೆಂದರೆ ರಾಮಕೃಷ್ಣ ಪರಮಹಂಸರು ಇಹಲೋಕ ತ್ಯಜಿಸಿದ್ದು ಆಗಸ್ಟ್ 16, 1886. ವಾಜಪೇಯಿ ಅಸ್ತಂಗತರಾಗಿದ್ದು ಆಗಸ್ಟ್ 16, 2018.

ಇಂದು ಅಟಲ್ ಬಿಹಾರಿ ವಾಜಪೇಯಿ ನಮ್ಮೊಂದಿಗಿಲ್ಲ. ಆದರೆ ಅವರು ಹಾಕಿಕೊಟ್ಟ ಆದರ್ಶ ಮಾರ್ಗ ಅವರೇ ರಚಿಸಿದ ವಿಶಾಲ ರಾಷ್ಟ್ರೀಯ ಹೆದ್ದಾರಿಗಳಂತೆ ನಮ್ಮ ಕಣ್ಣ ಮುಂದೆ ಇದೆ. ಈ ಆದರ್ಶ ಮಾರ್ಗದಲ್ಲಿ ನಡೆಯುವುದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ವೈರಲ್ ಚೆಕ್