ಲಂಡನ್‌[ಜು.24]: ಬೋರಿಸ್‌ ಜಾನ್ಸನ್‌ ಬ್ರಿಟನ್‌ನ ನೂತನ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಬ್ರೆಕ್ಸಿಟ್‌ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರಧಾನಿ ಹುದ್ದೆಗೆ ತೆರೆಸಾ ಮೇ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಹೀಗಾಗಿ ಪ್ರಧಾನಿ ಆಯ್ಕೆಗೆ ನಡೆದ ಕನ್ಸರ್ವೇಟಿವ್‌ ಪಕ್ಷದ ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಬೋರಿಸ್‌ ಜಾನ್ಸನ್‌ ಬುಧವಾರದಂದು ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಲಂಡನ್‌ ಮೇಯರ್‌ ಆಗಿದ್ದ ಜಾನ್ಸನ್‌ ತಮ್ಮ ಪ್ರತಿಸ್ಪರ್ಧಿ ಜೆರೆಮಿ ಹಂಟ್‌ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಅ.31ರ ಒಳಗಾಗಿ ಬ್ರೆಕ್ಸಿಟ್‌ ಬಿಕ್ಕಟ್ಟನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಬ್ರೆಕ್ಸಿಟ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ತಿಂಗಳು ರಾಜೀನಾಮೆ ಪ್ರಸ್ತಾಪವನ್ನು ಮುಂದಿಟ್ಟಿದ್ದ ಪ್ರಧಾನಿ ತೆರೆಸಾ ಮೇ ಬುಧವಾರ ರಾಣಿ ಎಲಿಜಬೆತ್‌-2 ಅವರಿಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಬಳಿಕ ಬೋರಿಸ್‌ ಜಾನ್ಸನ್‌ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರವಹಿಕೊಳ್ಳಲಿದ್ದಾರೆ.

ಬೋರಿಸ್‌ ಜಾನ್ಸನ್‌ ಯಾರು?

ಬೋರಿಸ್‌ ಜಾನ್ಸನ್‌ ಮೂಲತಃ ಅಮೆರಿಕದ ಅಮೆರಿಕದ ನ್ಯೂಯಾರ್ಕ್ನವರಾಗಿದ್ದಾರೆ. ಬೋರಿಸ್‌ ಜನಿಸಿದ್ದು, 1964ರಲ್ಲಿ. 1969ರಲ್ಲಿ ಅವರ ಕುಟುಂಬ ಲಂಡನ್‌ಗೆ ವಲಸೆ ಬಂದಿತ್ತು. 2008ರಿಂದ 2016ರ ಅವಧಿಯಲ್ಲಿ ಲಂಡನ್‌ ಮೇಯರ್‌ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಪ್ರಧಾನಿ ಥೆರೆಸಾ ಮೇ ಅವರ ಸಂಪುಟದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಬ್ರಿಕ್ಸಿಟ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆ ಆಗುವ ಮೂಲಕ ನಿಯೋಜಿತ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ.