Asianet Suvarna News Asianet Suvarna News

ಸರ್ಕಾರಕ್ಕೆ ಎದುರಾಗಿದೆ ಈಗ ಮತ್ತೊಂದು ಆತಂಕ

ಇಷ್ಟು ದಿನಗಳ ಕಾಲ ಸಚಿವ ಸಂಪುಟ ರಚನೆಯಾದ ವೇಳೆ ಸಚಿವ ಸ್ಥಾನ ಸಿಗದವರು ಅಸಮಾಧಾನಗೊಂಡು  ಬಂಡಾಯ ಎದ್ದಿದ್ದರು. ಇದೀಗ ಸರ್ಕಾರಕ್ಕೆ ಮತ್ತೊಂದು ಆತಂಕ ಎದುರಾಗಿದೆ. 

BJP State President BS Yeddyurappa Slams Karnataka Govt

ವಿಧಾನಸಭೆ :  ಕೃತಕ ಮತ್ತು ನೈಸರ್ಗಿಕ ನಿಯಮದ ವಿರುದ್ಧ ಜನಿಸಿದ ಸಾಂದರ್ಭಿಕ ಶಿಶು ಅದೆಷ್ಟುದಿನ ಜೀವಂತವಾಗಿರುತ್ತದೆಯೋ ಎಂಬುದನ್ನು ಕಾದು ನೋಡೋಣ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ ಸಾಂದರ್ಭಿಕ ಶಿಶು ಹೇಳಿಕೆಯನ್ನೇ ಪ್ರಸ್ತಾಪಿಸಿದ ಅವರು, ಕೃತಕ ಮತ್ತು ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಜನಿಸಿದ ಮಗು ಎಷ್ಟುದಿನ ಬದುಕಿರುತ್ತದೆಯೋ ನೋಡೋಣ. ರಾಜ್ಯ ಮೈತ್ರಿ ಸರ್ಕಾರವು ಕುಸಿದುಹೋಗಲೆಂದೇ ನಿರ್ಮಾಣವಾಗಿದೆ. ಯಾವುದೇ ಸೈದ್ಧಾಂತಿಕತೆ ಇಲ್ಲದೆ, ನೈತಿಕತೆ ಇಲ್ಲದೆ ಸರ್ಕಾರ ರಚನೆ ಮಾಡಲಾಗಿದೆ. ಈ ಸರ್ಕಾರಕ್ಕೆ ನೈಜ ತಂದೆ-ತಾಯಿ ಇರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಪ್ರಕ್ರಿಯೆ ನಡೆಸಿದರೆ ಸ್ಥಾನ ವಂಚಿತರು ಬಂಡಾಯ ಏಳಬಹುದು ಎಂಬ ಆತಂಕದಲ್ಲಿದೆ. ಹೀಗಾಗಿ ಯಾವುದೇ ಕಾರ್ಯಸೂಚಿ, ದಿಕ್ಸೂಚಿ ಇಲ್ಲದೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಶಾಸಕರ ಮೇಲೆಯೇ ಜೆಡಿಎಸ್‌-ಕಾಂಗ್ರೆಸ್‌ಗೆ ನಂಬಿಕೆ ಇಲ್ಲವಾಗಿದೆ. ಅಧಿಕಾರದ ಗದ್ದುಗೆ ಏರುವ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಿಂದಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಫಲಿತಾಂಶದ ಬಳಿಕ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿಕೊಳ್ಳುಲು ನಮಗೇನು ಸಂಕೋಚ ಇಲ್ಲ. ಆದರೆ, ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ದೊಂಬರಾಟವನ್ನು ಜನರು ಗಮನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಂಬೇಡ್ಕರ್‌ ಆಶಯಕ್ಕೆ ಅವಮಾನ:

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರ್ಕಾರ ಇರಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ರಚನೆಗೊಂಡಿರುವ ಸರ್ಕಾರವು ಇದಕ್ಕೆ ವ್ಯತಿರಿಕ್ತವಾಗಿದೆ. ಬಿಜೆಪಿಯನ್ನು ದೂರ ಇಡಬೇಕು ಎಂಬ ಏಕೈಕ ಕಾರಣಕ್ಕಾಗಿ ಅಂಬೇಡ್ಕರ್‌ ಅವರ ಆಶಯಗಳಿಗೆ ಅಣಕವಾಡುವ ರೀತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ರಚಿಸಿದ್ದು, ಅಂಬೇಡ್ಕರ್‌ ಆಶಯಕ್ಕೆ ಅವಮಾನ ಮಾಡಿದೆ ಎಂದು ಇದೇ ವೇಳೆ ಯಡಿಯೂರಪ್ಪ ಟೀಕಿಸಿದರು.

ರಾಜ್ಯ ಮೈತ್ರಿ ಸರ್ಕಾರವು ಜನರಿಂದ ರಚನೆಯಾಗಿಲ್ಲ, ಜನರಿಗಾಗಿಯೂ ರಚನೆಯಾಗಿಲ್ಲ. ಅಧಿಕಾರ ದಾಹಕ್ಕಾಗಿ ಅಪವಿತ್ರ ಮಾಡಿಕೊಳ್ಳಲಾಗಿದೆ. 129 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಚುನಾವಣೆಯಲ್ಲಿ 78ಕ್ಕೆ ಕುಸಿದಿದೆ. 40 ಸ್ಥಾನಗಳನ್ನು ಪಡೆದುಕೊಂಡಿದ್ದ ಜೆಡಿಎಸ್‌ ಈಗ 37 ಸ್ಥಾನಗಳನ್ನು ಪಡೆದುಕೊಂಡಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 37 ಶಾಸಕರನ್ನು ಹೊಂದಿರುವ ಪಕ್ಷದವರು ಮುಖ್ಯಮಂತ್ರಿಯಾಗಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ನಡೆದಿರಲಿಲ್ಲ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಮುಖ್ಯಮಂತ್ರಿಯಾಗಿದ್ದರೆ ಜನತೆ ಒಪ್ಪುತ್ತಿದ್ದರೇನೋ. ಆದರೆ, ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ರಾಜಕಾರಣಕ್ಕಾಗಿ ಜನರ ಹಿತಾಸಕ್ತಿ ಬಲಿ ಕೊಡಲು ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದನ್ನು ರಾಜ್ಯದ ಜನತೆ ಸ್ವೀಕರಿಸಿಲ್ಲ ಎಂದು ಹೇಳಿದರು.

Follow Us:
Download App:
  • android
  • ios