Asianet Suvarna News Asianet Suvarna News

ಹಾಸ್ಟೆಲ್‌ ದೌರ್ಭಾಗ್ಯ ಸ್ಫೋಟಿಸಿದ ಬಿಜೆಪಿ!

ರಾಜ್ಯದಲ್ಲಿನ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಇದೆ ಎನ್ನಲಾದ ಅವಸ್ಥೆಯನ್ನು ಎತ್ತಿ ತೋರಿಸುವ ‘ಸರ್ಕಾರಿ ಹಾಸ್ಟೆಲ್‌; ವಿದ್ಯಾರ್ಥಿಗಳ ಪಾಲಿಗೆ ಜೀವನ ನರಕ, ಅಧಿಕಾರಿ/ಮಂತ್ರಿಗಳ ಲೂಟಿಗೆ ಸ್ವರ್ಗ’ ಎಂಬ ಸಮೀಕ್ಷಾ ವರದಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

BJP Slams Karnataka Govt

ಬೆಂಗಳೂರು : ರಾಜ್ಯದಲ್ಲಿನ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಇದೆ ಎನ್ನಲಾದ ಅವಸ್ಥೆಯನ್ನು ಎತ್ತಿ ತೋರಿಸುವ ‘ಸರ್ಕಾರಿ ಹಾಸ್ಟೆಲ್‌; ವಿದ್ಯಾರ್ಥಿಗಳ ಪಾಲಿಗೆ ಜೀವನ ನರಕ, ಅಧಿಕಾರಿ/ಮಂತ್ರಿಗಳ ಲೂಟಿಗೆ ಸ್ವರ್ಗ’ ಎಂಬ ಸಮೀಕ್ಷಾ ವರದಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಈ ವರದಿಯಲ್ಲಿ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಇವೆ ಎನ್ನಲಾದ ಸಮಸ್ಯೆಗಳು, ಕೊರತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದ್ದು, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಪೈಕಿ ಅತ್ಯಂತ ದುಸ್ಥಿತಿಗೆ ಒಳಗಾಗಿರುವ ಜಿಲ್ಲೆಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಮತ್ತು ಬೆಳಗಾವಿ ಮೊದಲ ಸ್ಥಾನದಲ್ಲಿವೆ. ಎರಡನೆಯ ಸ್ಥಾನದಲ್ಲಿ ಕಲಬುರಗಿ ಜಿಲ್ಲೆ ಎಂಬುದನ್ನು ಪ್ರಸ್ತಾಪಿಸಲಾಗಿದೆ.

ಪಕ್ಷದ ಎಸ್‌ಟಿ ಮೋರ್ಚಾ, ಎಸ್‌ಸಿ ಮೋರ್ಚಾ, ಒಬಿಸಿ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು-ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಒಟ್ಟು 2,590 (ಎಸ್‌ಸಿ, ಎಸ್‌ಟಿಗೆ ಸೇರಿದ 1080 ಮತ್ತು ಒಬಿಸಿ ವರ್ಗಕ್ಕೆ ಸೇರಿದ 1510) ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ವಾರ್ಡನ್‌ ಹಾಗೂ ಸಂಬಂಧಪಟ್ಟಅಧಿಕಾರಿಗಳನ್ನು ಖುದ್ದಾಗಿ ಮಾತನಾಡಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಈ ವರದಿ ಬಿಡುಗಡೆಗೊಳಿಸಿದರು. ಜತೆಗೆ ರಾಜ್ಯದ ಇತರ 15 ಜಿಲ್ಲೆಗಳಲ್ಲಿ ಪಕ್ಷದ ಪ್ರಮುಖ ಮುಖಂಡರು ವರದಿ ಬಿಡುಗಡೆ ಮಾಡಿದರು.

ಹಾಸ್ಟೆಲ್‌ಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ವರದಿ ಸಿದ್ಧಪಡಿಸಲಾಗಿದ್ದು, ಇದನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವ್ಯಾವ ಅಂಶ ಪರಿಗಣನೆ?:

ಈ ಹಾಸ್ಟೆಲ್‌ಗಳ ಅನುಪಾತಕ್ಕೆ ಅನುಗುಣವಾಗಿ ಕಟ್ಟಡ, ಕೊಠಡಿಗಳು, ಸ್ನಾನ ಗೃಹ, ಶೌಚಾಲಯ ವ್ಯವಸ್ಥೆ, ಗುಣಮಟ್ಟದ ಆಹಾರ ಮತ್ತು ಶುದ್ಧ ನೀರು ಪೂರೈಕೆ, ವಾರ್ಡನ್‌ ಸೌಲಭ್ಯ, ವೈದ್ಯಕೀಯ ವ್ಯವಸ್ಥೆ, ಮಾನವ ಸಂಪನ್ಮೂಲಗಳು, ಅಗತ್ಯ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಲಾಗಿದೆ.

ಬಹುತೇಕ ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳಿರುವುದು ಕಂಡು ಬಂದಿದೆ. ಸಮೀಕ್ಷೆಯಲ್ಲಿ ನೀಡಿರುವ ಮಾಹಿತಿ ಅನುಸಾರ ರಾಜ್ಯದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ವರ್ಗಕ್ಕೆ ಸೇರಿದ 1080 ಹಾಸ್ಟೆಲ್‌ಗಳಲ್ಲಿ 92,507 ವಿದ್ಯಾರ್ಥಿಗಳು ಮತ್ತು 1510 ಹಿಂದುಳಿದ ವರ್ಗದ ಹಾಸ್ಟೆಲ್‌ಗಳಲ್ಲಿ 1,04,592 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಒಟ್ಟು 2590 ಹಾಸ್ಟೆಲ್‌ಗಳ ಪೈಕಿ 1727 ಸ್ವಂತ ಕಟ್ಟಡ ಹಾಗೂ 760 ಬಾಡಿಗೆ ಕಟ್ಟಡಗಳಲ್ಲಿ ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿದೆ.

ಈ ವರದಿಯಲ್ಲಿ ಹಾಸ್ಟೆಲ್‌ಗಳ ಮೂಲಸೌಕರ್ಯ ಕೊರತೆಗಳಿಗೆ ಸಂಬಂಧಿಸಿದ ಫೋಟೋಗಳನ್ನೂ ಲಗತ್ತಿಸಲಾಗಿದೆ. ಅನೇಕ ಹಾಸ್ಟೆಲ್‌ಗಳ ಶೌಚಾಲಯಗಳ ಬಾಗಿಲುಗಳು ಮುರಿದು ಹೋಗಿರುವುದು, ಒದಲು ಕೂಡುವುದಕ್ಕೂ ಜಾಗವಿಲ್ಲದ ಕಿಷ್ಕಿಂದೆಯಂತಿರುವ ಕೊಠಡಿಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು, ಕೆಟ್ಟು ಕುಳಿತ ಶುದ್ಧ ನೀರಿನ ಟ್ಯಾಂಕ್‌ಗಳು, ಗಟಾರಕ್ಕೆ ಹೋಗಬೇಕಾದ ನೀರು ಮೆಟ್ಟಿಲುಗಳ ಮೇಲೆ ನಿಂತುಕೊಂಡಿರುವುದು, ಉಪಯೋಗಿಸಲು ಯೋಗ್ಯವಲ್ಲದ ಸ್ನಾನಗೃಹಗಳು, ಮುರಿದು ಹೋಗಿರುವ ಮಂಚಗಳು, ಕೊಳಕಿನಿದ ಕೂಡಿರುವ ಅಡುಗೆ ಮನೆ ಮೊದಲಾದವುಗಳನ್ನು ಫೋಟೋಗಳ ಮೂಲಕ ತೋರಿಸಲಾಗಿದೆ.

ಬಿಡುಗಡೆ ಸಮಾರಂಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಶಾಸಕ ಅಶ್ವತ್ಥನಾರಾಯಣ, ಮುಖಂಡರಾದ ಶ್ರುತಿ, ರವೀಂದ್ರ, ಶಾರದಾ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

ವರದಿಯ ಮುಖ್ಯಾಂಶ

- ಎಸ್‌ಸಿ/ಎಸ್‌ಟಿಗೆ ಸೇರಿದ 138 ಮತ್ತು ಒಬಿಸಿಗೆ ಸೇರಿದ 239 ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳೇ ಇಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 81 ಮತ್ತು ಒಬಿಸಿಗೆ ಸೇರಿದ 300 ಹಾಸ್ಟೆಲ್‌ಗಳಲ್ಲಿನ ಶೌಚಾಲಯ ಬಳಸಲು ಯೋಗ್ಯವಾಗಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 25 ಮತ್ತು ಒಬಿಸಿಗೆ ಸೇರಿದ 540 ಹಾಸ್ಟೆಲ್‌ಗಳು ಸ್ವಚ್ಛತೆಯ ಕೊರತೆಯಿಂದ ವಾಸಮಾಡಲು ಅರ್ಹವಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 58 ಮತ್ತು ಒಬಿಸಿಗೆ ಸೇರಿದ 273 ಹಾಸ್ಟೆಲ್‌ಗಳಲ್ಲಿ ಉಗ್ರಾಣಗಳಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 60 ಮತ್ತು ಒಬಿಸಿಗೆ ಸೇರಿದ 276 ಹಾಸ್ಟೆಲ್‌ಗಳಲ್ಲಿ ಸ್ನಾನಗೃಹಗಳು ಯೋಗ್ಯವಾಗಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 352 ಮತ್ತು ಒಬಿಸಿಗೆ ಸೇರಿದ 754 ಹಾಸ್ಟೆಲ್‌ಗಳಲ್ಲಿ ಸ್ನಾನಕ್ಕೆ ಬಿಸಿನೀರಿನ ಸೌಲಭ್ಯವಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 113 ಮತ್ತು ಒಬಿಸಿಗೆ ಸೇರಿದ 385 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 257 ಮತ್ತು ಒಬಿಸಿಗೆ ಸೇರಿದ 468 ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 225 ಮತ್ತು ಒಬಿಸಿಗೆ ಸೇರಿದ 431 ಹಾಸ್ಟೆಲ್‌ಗಳಲ್ಲಿ ಕೊಠಡಿಯ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದು, ಅಕ್ಷರಶಃ ಕುರಿದೊಡ್ಡಿಗಳಂತಾಗಿವೆ.

- ಎಸ್‌ಸಿ/ಎಸ್‌ಟಿಗೆ ಸೇರಿದ 338 ಮತ್ತು ಒಬಿಸಿಗೆ ಸೇರಿದ 845 ಹಾಸ್ಟೆಲ್‌ಗಳಲ್ಲಿ ಮಲಗಲು ಮಂಚ, ಹಾಸಿಗೆ, ದಿಂಬು, ಹೊದಿಕೆಗಳು ಲಭ್ಯವಿಲ್ಲ.

- ಎಸ್‌ಸಿ/ಎಸ್‌ಟಿಗೆ ಸೇರಿದ 32 ಹಾಸ್ಟೆಲ್‌ಗಳಲ್ಲಿ ಉಪಹಾರದ ವ್ಯವಸ್ಥೆಯಿಲ್ಲ. 352 ಹಾಸ್ಟೆಲ್‌ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಿಲ್ಲ ಹಾಗೂ 51 ಹಾಸ್ಟೆಲ್‌ಗಳಲ್ಲಿ ರಾತ್ರಿ ಊಟದ ವ್ಯವಸ್ಥೆಯಿಲ್ಲ.

- ಅದೇ ರೀತಿ ಒಬಿಸಿಗೆ ಸೇರಿದ 169 ಹಾಸ್ಟೆಲ್‌ಗಳಲ್ಲಿ ಉಪಹಾರದ ವ್ಯವಸ್ಥೆಯಿಲ್ಲ. 568 ಹಾಸ್ಟೆಲ್‌ಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಿಲ್ಲ ಹಾಗೂ 146 ಹಾಸ್ಟೆಲ್‌ಗಳಲ್ಲಿ ರಾತ್ರಿ ಊಟದ ವ್ಯವಸ್ಥೆಯಿಲ್ಲ.

Follow Us:
Download App:
  • android
  • ios