ನವದೆಹಲಿ(ಆ.03): ರಾಷ್ಟ್ರಮಟ್ಟದಲ್ಲಿ ಬಿಜೆಪಿ ಅಗಾಧವಾಗಿ ಬೆಳೆದಿರುವುದಕ್ಕೆ ಪಕ್ಷದ ಸಿದ್ಧಾಂತ ಕಾರಣವೇ ಹೊರತು ಒಂದು ನಿರ್ದಿಷ್ಟ ಕುಟುಂಬ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಸಂಸದರಿಗಾಗಿ ಆಯೋಜಿಸಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿದ್ಧಾಂತದ ತಳಹದಿಯಲ್ಲಿ ಕಾರ್ಯಕರ್ತರ ಪರಿಶ್ರಮದಿಂದ ಕಟ್ಟಿ ಬೆಳೆಸಿದ ಪಕ್ಷದ ಘನತೆಯನ್ನು ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪಕ್ಷ ತನ್ನ ಸಿದ್ಧಾಂತದ ಗಾದರ್ಶದಿಂದ ಇಷ್ಟು ಎತ್ತರಕ್ಕೆ ಬೆಳೆದಿದೆಯೇ ಹೊರತು ಒಂದು ನಿರ್ದಿಷ್ಟ ಕುಟುಂಬದ ಆಶ್ರಯದಲ್ಲಿ ಅಲ್ಲ ಎಂದು ಮೋದಿ ಪರೋಕ್ಷವಾಗಿ ಕಾಂಗ್ರಸ್ ಕಾಲೆಳೆದರು.

ಪಕ್ಷ ನಿಮಗೆ ಯಾವುದೇ ಜವಾಬ್ದಾರಿ ಕೊಡಲಿ ಆದರೆ ನೀವು ಮಾತ್ರ ನಿಮ್ಮೊಳಗಿನ ಕಾರ್ಯಕರ್ತನನ್ನು ಎಂದಿಗೂ ಮರೆಯಾಗಲು ಬಿಡಬೇಡಿ. ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಗುಣ ನಿಮ್ಮಲ್ಲಿ ಜೀವಂತವಾಗಿರಲಿ ಎಂದು ಮೋದಿ ಬಿಜೆಪಿ ಸಂಸದರಿಗೆ ಕಿವಿಮಾತು ಹೇಳಿದರು.