ನವದೆಹಲಿ(ಆ.31): ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆಯನ್ನು ರಾಷ್ಟ್ರ ರಾಜಧಾನಿ ನವದೆಹಲಿಗೂ ಅನ್ವಯಿಸಬೇಕು ಎಂದು ಈಶಾನ್ಯ ದೆಹಲಿ ಬಿಜೆಪಿ ಸಂಸದ ಹಾಗೂ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ  ಮನೋಜ್ ತಿವಾರಿ ಆಗ್ರಹಿಸಿದ್ದಾರೆ.

ಈ ಕುರಿತು  ಮಾತನಾಡಿರುವ ಮನೋಜ್ ತಿವಾರಿ, ದೆಹಲಿಯಲ್ಲೂ ಪಾರ ಪ್ರಮಾಣದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಅಪಾಯದ ಹಂತ ತಲುಪುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಮನೋಜ್ ತಿವಾರಿ ಹೇಳಿಕೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.

ಈ ಮಧ್ಯೆ ಮನೋಜ್ ತಿವಾರಿ ಹೇಳಿಕೆಯನ್ನು ಖಂಡಿಸಿರುವ ದೆಹಲಿ ಮಹಿಳಾ ಕಾಂಗ್ರೆಸ್ ಘಟಕ, ದೆಹಲಿ ಮೂಲದವರೇ ಅಲ್ಲದ ಮನೋಜ್ ತಿವಾರಿ ಇಂತಹ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದೆ.