Asianet Suvarna News Asianet Suvarna News

ಹೊಸ ಸ್ಪೀಕರ್‌ ನೇಮಕಕ್ಕೆ ಬಿಜೆಪಿ ಸಿದ್ಧತೆ : ಬೋಪಯ್ಯ ಪರ ಒಲವು

ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದು, ಇದೀಗ ನೂತನ ಸ್ಪೀಕರ್ ಆಗಿ ಬೋಪಯ್ಯ ನೇಮಕವಾಗುವ ಸಾಧ್ಯತೆ ಹೆಚ್ಚಿದೆ. 

BJP May Appoint Bopayya As Karnataka Speaker
Author
Bengaluru, First Published Jul 30, 2019, 7:28 AM IST

ಬೆಂಗಳೂರು [ಜು.30]:  ವಿಧಾನಸಭೆಯ ಹಾಲಿ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಸೋಮವಾರ ಕಲಾಪದ ನಂತರ ಅಥವಾ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ತಕ್ಷಣವೇ ಹೊಸ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ. ಹಾಗಾದಲ್ಲಿ ವಿಧಾನಸಭೆಯ ಅಧಿವೇಶನವನ್ನು ಬುಧವಾರ ಅಥವಾ ಗುರುವಾರದವರೆಗೆ ನಡೆಸುವ ಚಿಂತನೆ ನಡೆದಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ರಮೇಶ್‌ ಕುಮಾರ್‌ ಅವರು ಮಾತನಾಡಿ ಪರೋಕ್ಷವಾಗಿ ಸೋಮವಾರ ರಾಜೀನಾಮೆ ನೀಡುವ ಸುಳಿವು ನೀಡಿದರು. ಆದರೆ, ವಿಶ್ವಾಸಮತ ಯಾಚನೆ ಮತ್ತು ಧನವಿನಿಯೋಗ ವಿಧೇಯಕ ಎರಡೂ ಪ್ರಕ್ರಿಯೆಗಳು ಸಂಜೆಯೊಳಗಾಗಿ ಮುಗಿದರೆ ಸರಿ. ಒಂದು ವೇಳೆ ಚರ್ಚೆ ಮಂಗಳವಾರದವರೆಗೂ ನಡೆದಲ್ಲಿ ಅಧಿವೇಶನವನ್ನು ಗುರುವಾರದವರೆಗೆ ನಡೆಸುವ ನಿರೀಕ್ಷೆ ಇದೆ. ನೂತನ ಸ್ಪೀಕರ್‌ ಆಯ್ಕೆಗಾಗಿ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆಗಾಗಿ ಎರಡು ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ ಹಾಲಿ ಸ್ಪೀಕರ್‌ ಮುಂದೇನು ಮಾಡುವರು ಎಂಬುದರ ಮೇಲೆ ನೂತನ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಿಂತಿದ್ದು, ಬುಧವಾರದವರೆಗೆ ಅಧಿವೇಶನ ನಡೆಯುವ ಬಗ್ಗೆ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ವಿಷಯ ತಿಳಿಸಲಾಗಿದೆ.

ಯಾರಾಗಬಹುದು ನೂತನ ಸ್ಪೀಕರ್‌?

ಈ ನಡುವೆ ಮುಂದಿನ ಸ್ಪೀಕರ್‌ ಯಾರಾಗಬೇಕು ಎಂಬುದರ ಬಗ್ಗೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದ್ದರೂ ಅಂತಿಮ ನಿರ್ಧಾರ ಇದುವರೆಗೆ ಕೈಗೊಂಡಿಲ್ಲ.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್‌ ಆಗಿದ್ದ ಕೆ.ಜಿ.ಬೋಪಯ್ಯ, ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಎಸ್‌.ಸುರೇಶ್‌ ಕುಮಾರ್‌ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರುಗಳು ನೂತನ ಸ್ಪೀಕರ್‌ ಆಯ್ಕೆಗೆ ಸಂಬಂಧಿಸಿದಂತೆ ಕೇಳಿಬರುತ್ತಿವೆ.

ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೊದಲ ಆಯ್ಕೆ ಬೋಪಯ್ಯ ಅವರೇ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಬೋಪಯ್ಯ ಅವರು ಸ್ಪೀಕರ್‌ ಆಗಿ ಅನೇಕ ಸಂದರ್ಭಗಳಲ್ಲಿ ಸರ್ಕಾರವನ್ನು ಅಪಾಯದಿಂದ ಪಾರು ಮಾಡಿರುವುದರಿಂದ ಮತ್ತೆ ಅವರೇ ಸ್ಪೀಕರ್‌ ಆಗಲಿ ಎಂಬುದು ಯಡಿಯೂರಪ್ಪ ಅವರ ಅಭಿಮತ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಬೋಪಯ್ಯ ಅವರನ್ನು ಬಲವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗದ ಹಿನ್ನೆಲೆಯಲ್ಲಿ ಅವರ ಆಯ್ಕೆಗೆ ಪಕ್ಷದ ವರಿಷ್ಠರು ಒಪ್ಪಿಗೆ ನೀಡುತ್ತಾರೆಯೇ ಎಂಬುದು ಅಸ್ಪಷ್ಟವಾಗಿದೆ.

ಇನ್ನುಳಿದಂತೆ ಜಗದೀಶ್‌ ಶೆಟ್ಟರ್‌ ಅವರಿಗೆ ಸ್ಪೀಕರ್‌ ಹುದ್ದೆಗಿಂತ ಸಚಿವರಾಗುವುದಕ್ಕೆ ಹೆಚ್ಚಿನ ಒಲವಿದೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಶೆಟ್ಟರ್‌ ಅವರು ವರಿಷ್ಠರು ಸೂಚಿಸಿದಲ್ಲಿ ಸ್ಪೀಕರ್‌ ಹುದ್ದೆಯನ್ನು ಒಪ್ಪಿಕೊಳ್ಳಬಹುದು. ಆದರೆ, ಅವರಿಗೇ ಆಯ್ಕೆ ಬಿಟ್ಟಲ್ಲಿ ಸಚಿವ ಸ್ಥಾನ ಅಲಂಕರಿಸಲು ಮುಂದಾಗಬಹುದು. ಸುರೇಶ್‌ ಕುಮಾರ್‌ ಅವರ ಬಗ್ಗೆಯೂ ಯಡಿಯೂರಪ್ಪ ಅವರಿಗೆ ಒಲವಿದೆ. ಸಚಿವ ಸ್ಥಾನ ನೀಡುವುದು ಕಷ್ಟಸಾಧ್ಯವಾದಲ್ಲಿ ಸ್ಪೀಕರ್‌ ಸ್ಥಾನಕ್ಕಾಗಿ ಸುರೇಶ್‌ ಕುಮಾರ್‌ ಅವರನ್ನು ಮನವೊಲಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ. ಅವರನ್ನು ಬಿಟ್ಟರೆ ಕಾಗೇರಿ ಅವರ ಹೆಸರೂ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios