ಇಕ್ಕಟ್ಟಿಗೆ ಸಿಲುಕಿದ ಮಾಜಿ ಸಿಎಂ ಸಿದ್ದರಾಮಯ್ಯ

First Published 13, Jul 2018, 9:23 AM IST
BJP Leaders Slams Congress Leader Siddramaiah
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ಗುರುವಾರ ನಡೆದಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. 

ವಿಧಾನಸಭೆ :  ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಸೇರಿದಂತೆ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಿಂದಿನ ಕಾಂಗ್ರೆಸ್‌ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸದಿರುವ ಬಗ್ಗೆ ಸದನದಲ್ಲಿ ಆಡಳಿತ, ಪ್ರತಿಪಕ್ಷ ನಡುವೆ ಆರೋಪ ಪ್ರತ್ಯಾರೋಪ, ವಾಕ್ಸಮರ ನಡೆಯಿತು.

ಗುರುವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌, ಕೃಷ್ಣಾ ನದಿ ಕೊಳ್ಳದ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರು. ನಂತೆ 50 ಸಾವಿರ ಕೋಟಿ ರು. ವೆಚ್ಚ ಮಾಡುವುದಾಗಿ ಕಾಂಗ್ರೆಸ್‌ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಖರ್ಚು ಮಾಡಿದ್ದು ಮಾತ್ರ ಕೇವಲ ಎಂಟು ಕೋಟಿ ರು. ಮಾತ್ರ ಎಂದು ಹೇಳಿದರು. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಕೃಷ್ಣಾ ನದಿ ಕೊಳ್ಳದ ಯೋಜನೆಗೆ ಮಾತ್ರ ಹೇಳಿಲ್ಲ. ಒಟ್ಟಾರೆ ನೀರಾವರಿ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರು.ನಂತೆ 50 ಸಾವಿರ ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಹೇಳಲಾಗಿತ್ತು ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಹೇಳಿಕೆ ಒಪ್ಪದ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, 2013ರ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈಗ ಸಿದ್ದರಾಮಯ್ಯ ಅದನ್ನು ತಿರುಚುತ್ತಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ನಡುವೆ ಆರೋಪ ಪ್ರತ್ಯಾರೋಪ ಕೇಳಿ ಬಂದವು. ಈ ನಡುವೆ, ಮಾಜಿ ಜಲಸಂಪನ್ಮೂಲ ಎಂ.ಬಿ.ಪಾಟೀಲ್‌ ಅವರು ಪ್ರಣಾಳಿಕೆಯ ಒಂದು ಪುಸ್ತಕದಲ್ಲಿ ಕೃಷ್ಣಾ ನದಿ ಕೊಳ್ಳದ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರು.ನಂತೆ 50 ಸಾವಿರ ಕೋಟಿ ರು. ವೆಚ್ಚ ಮಾಡುವುದಾಗಿ ಹೇಳಲಾಗಿದೆ ಎಂದು ಹೇಳಿದಾಗ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದರು.

ಇದನ್ನು ಬಿಜೆಪಿ ಸದಸ್ಯರು ತನ್ನ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್‌ ವಿರುದ್ಧ ವಾಕ್ಸಮರ ಮುಂದುವರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹೊಸಪೇಟೆಯಿಂದ ಕೂಡಲಸಂಗಮಕ್ಕೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸಿ, ನೀರಾವರಿ ಯೋಜನೆಗಾಗಿ 50 ಸಾವಿರ ಕೋಟಿ ರು. ಖರ್ಚು ಆಗಬಹುದೆಂದು ಲೆಕ್ಕಾಚಾರ ಹಾಕಿ ಐದು ವರ್ಷದಲ್ಲಿ ಪ್ರತಿ ವರ್ಷ 10 ಕೋಟಿ ರು.ನಂತೆ ಖರ್ಚು ಮಾಡುವುದಾಗಿ ಹೇಳಿಕೆ ನೀಡಲಾಗಿತ್ತು. ಅಂತೆಯೇ 58 ಸಾವಿರ ಕೋಟಿ ರು. ಮಂಜೂರು ಮಾಡಿ, 47 ಸಾವಿರ ಕೋಟಿ ರು. ಖರ್ಚು ಮಾಡಿದ್ದೇವೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಯಡಿಯೂರಪ್ಪ, ಕೃಷ್ಣಾ ನದಿ ಕೊಳ್ಳದ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರು.ನಂತೆ 50 ಸಾವಿರ ಕೋಟಿ ರು. ವೆಚ್ಚ ಮಾಡುವ ಕುರಿತು ದಾಖಲೆ ಇದೆ. ಒಂದು ವೇಳೆ ನಾವು ಸುಳ್ಳು ಹೇಳಿದ್ದಲ್ಲಿ ಕ್ಷಮೆ ಕೇಳುತ್ತೇವೆ ಎಂದರು.

ಯಡಿಯೂರಪ್ಪ ಮಾತಿಗೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಬೆಂಬಲ ನಿಂತರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡಲಾಗಿದೆ. ಇದು ಸುಳ್ಳಾದರೆ ನಮ್ಮ ಮಾತನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಹೇಳಿ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಓದಿದರು. ಈ ವೇಳೆ ಸಿದ್ದರಾಮಯ್ಯಅವರು, ನಿಮ್ಮ (ಬಿಜೆಪಿ) ಆಡಳಿತವಧಿಯಲ್ಲಿ ನೀರಾವರಿಗೆ ಎಷ್ಟುಖರ್ಚು ಮಾಡಲಾಗಿದೆ ಎಂದು ಪ್ರಶ್ನಿಸಿದರು. ವಿಷಯಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಯಿತು. ಆಗ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಮುದ್ರಿತವಾಗಿರುವ ಪ್ರಣಾಳಿಕೆ ಪುಸ್ತಕಗಳ ಪೈಕಿ ಒಂದರಲ್ಲಿ ತಪ್ಪಾಗಿ ಮುದ್ರಿತವಾಗಿದೆ ಎಂದರು. ತಕ್ಷಣ ಬಸವರಾಜ್‌ ಬೊಮ್ಮಾಯಿ, ಈಗ ತಪ್ಪನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ್ನು ಮತ್ತಷ್ಟುಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು. ಈ ನಡುವೆ, ಸಭಾಧ್ಯಕ್ಷ ರಮೇಶ್‌ ಕುಮಾರ್‌ ಮಧ್ಯಪ್ರವೇಶಿಸಿ, ಎಲ್ಲವೂ ನಮಗೆ ಗೊತ್ತಿದ್ದು, ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಚರ್ಚೆಗೆ ತೆರೆ ಎಳೆದರು.

loader