ಬೆಂಗಳೂರು, [ನ.12]: ದೇಶ, ಭಾಷೆ ವಿಚಾರದಲ್ಲಿ ಅನಂತಕುಮಾರ್ ಅವರಿಗೆ ಅಪಾರವಾದ ಪ್ರೀತಿ ಇದೆ. ಇದಕ್ಕೆ ಸಾಕ್ಷಿ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಇವರದ್ದು. 

ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಅವಕಾಶ ಸಿಗುವುದೇ ಅಪರೂಪ. ಹೀಗಿರುವಾಗ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿದ್ದರು.

Live Updates: ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ

2015ರ ಅಕ್ಟೋಬರ್​ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ವೇಳೆ ಅನಂತಕುಮಾರ್ ಅವರು ಕನ್ನಡದಲ್ಲಿ ಭಾಷಣ  ಮಾಡಿ ಎಲ್ಲರ ಗಮನಸೆಳೆದಿದ್ದರು. ವಿಶ್ವಸಂಸ್ಥೆಯಲ್ಲಿ ಅನಂತ್​ ಕುಮಾರ್​​ ಅವರು ಕನ್ನಡದಲ್ಲಿ ಸ್ವಾಗತ ಕೋರಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆ ತಂದಿತ್ತು.

‘ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ನಿಮ್ಮೆಲ್ಲರಿಗೂ ನನ್ನ ಮುಂಜಾನೆಯ ಶುಭಾಶಯಗಳು…’ ಎಂದು ಅನಂತ್​​​ಕುಮಾರ್​​ ಭಾಷಣ ಆರಂಭಿಸಿದ್ದರು.

ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಸಂಕ್ಷಿಪ್ತ ಪರಿಚಯ

ಅಂದು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅನಂತ್​ ಕುಮಾರ್​, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಕನ್ನಡ ನಾಡು, ನುಡಿಯ ಹಿರಿಮೆಯನ್ನು ಹೆಚ್ಚಿಸಿದ್ದರು.

ವಿಶ್ವ ಶಾಂತಿ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಸಂಕಲ್ಪ ತೊಟ್ಟಿದೆ. ಜಾಗತಿಕ ಮಟ್ಟದ ಅಪರಾಧ ಚಟುವಟಿಕೆಗಳನ್ನು ತಡೆಯುವಲ್ಲಿ ಮತ್ತು ನಿಯಂತ್ರಿಸುವಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿಗಳು ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಕನ್ನಡದಲ್ಲಿಯೇ ಕಹಳೆಯೂದಿದ್ದರು.