Asianet Suvarna News Asianet Suvarna News

ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಸಂಕ್ಷಿಪ್ತ ಪರಿಚಯ

ಕೇಂದ್ರ ಸಚಿವ ಅನಂತ ಕುಮಾರ್ ಅವರು ಇಂದು (ಸೋಮವಾರ) ಬೆಳಗಿನ ಜಾವ ವಿಧಿವಶರಾಗಿದ್ದು, ಅವರು ನಡೆದುಬಂದಿರುವ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Profile of Union Minister Ananth Kumar
Author
Bengaluru, First Published Nov 12, 2018, 7:07 AM IST

ಬೆಂಗಳೂರು, [ನ.12]: ಕೇಂದ್ರ ಸಚಿವ ಅನಂತ ಕುಮಾರ್ ಅವರು ಇಂದು (ಸೋಮವಾರ) ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ಅನಂತ ಕುಮಾರ್ ಕಳೆದ ಕೆಲ ದಿನಗಳಿಂದ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Live Updates: ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ

ಇನ್ನು ಇವರ ಒಂದು ಸಂಕ್ಷಿಪ್ತ ಪರಿಚಯ ನೋಡುವುದಾದರೆ, ಬಿಜೆಪಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದ ನಾಯಕರಲ್ಲಿ ಎಚ್.ಎನ್.ಅನಂತ ಕುಮಾರ್ ಒಬ್ಬರು. 

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಇವರು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರು. 

ಜುಲೈ 22, 1959ರಂದು ಜನಿಸಿದ ಅನಂತಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿ. ಪತ್ನಿ ಡಾ. ತೇಜಸ್ವಿನಿ,  ಹೆಣ್ಣು ಮಕ್ಕಳು ಐಶ್ವರ್ಯ, ವಿಜೇತ.

ಹುಬ್ಬಳ್ಳಿಯ ಕೆ.ಎಸ್.ಕಲಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಜೆ.ಎಸ್.ಎಸ್.ಎಸ್‌ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾಮಾಜಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಎಬಿವಿಪಿ ರಾಜ್ಯ ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಡಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. 1987ರಲ್ಲಿ ಬಿಜೆಪಿ ಸೇರಿದ್ದ ಅನಂತಕುಮಾರ್ ಕರ್ನಾಟಕ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 

1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1996ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದ, ಅನಂತಕುಮಾರ್ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಮಾನಯಾನ ಖಾತೆ ಸಚಿವರಾಗಿದ್ದರು. 

ಎನ್‌ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ವ್ಯವಹಾರ, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದರಲ್ಲಿ ಅನಂತ್ ಕುಮಾರ್ ಅವರ ಶ್ರಮ ಹೆಚ್ಚಿದೆ. 

ದೇಶ, ಭಾಷೆ ವಿಚಾರದಲ್ಲಿ ಅನಂತಕುಮಾರ್ ಅವರಿಗೆ ಅಪಾರವಾದ ಪ್ರೀತಿ ಇದೆ. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಇವರದ್ದು. ಕರ್ನಾಟಕ ಬಿಜೆಪಿ ಮತ್ತು ರಾಷ್ಟ್ರೀಯ ನಾಯಕರ ನಡುವಿನ ಸಂಪರ್ಕ ಸೇತುವೆಯಾಗಿದ್ದರು. ಇದೀಗ ಇವರ ನಿಧನದಿಂದ ಬಿಜೆಪಿಗೆ ತುಂಬಲಾಗದ ನಷ್ಟವಾಗಿದೆ.

Follow Us:
Download App:
  • android
  • ios