ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ೧೫೦ಕ್ಕೂ ಹೆಚ್ಚು ಸ್ಥಾನ ಸಿಗುವುದು ಖಚಿತವಾಗಿದ್ದು, ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಮುಂದಿನ ಸರ್ಕಾರ ಬಿಜೆಪಿಯದ್ದೇ ಆಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಆ.06): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ೧೫೦ಕ್ಕೂ ಹೆಚ್ಚು ಸ್ಥಾನ ಸಿಗುವುದು ಖಚಿತವಾಗಿದ್ದು, ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಮುಂದಿನ ಸರ್ಕಾರ ಬಿಜೆಪಿಯದ್ದೇ ಆಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ನಗರದ ಅರಮನೆ ಮೈದಾನದಲ್ಲಿನ ಗಾಯತ್ರಿ ವಿಹಾರದಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ಗುಪ್ತಚರ ಸಮೀಕ್ಷೆ, ಪಕ್ಷದ ವತಿಯಿಂದ ನಡೆದಿರುವ ಸಮೀಕ್ಷೆ ಸೇರಿದಂತೆ ಅನೇಕ ಸಮೀಕ್ಷೆಗಳಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ವರದಿ ಇದೆ. ಹೀಗಾಗಿ ಕಾರ್ಯಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆಯ ಮಾತುಗಳನ್ನಾಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ರಾಜ್ಯದ ಜನತೆ ಸಹ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷದ ವರಿಷ್ಠರ ಮತ್ತು ರಾಜ್ಯದ ಜನರ ಆಪೇಕ್ಷೆಯಂತೆ ಅವರ ಬೇಡಿಕೆಯನ್ನು ಈಡೇರಿಸಬೇಕಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಬಲವಾಗಿ ಸ್ಫರ್ಧಿಸಬೇಕು. ರಾಜ್ಯಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ತಿಂಗಳು ಭೇಟಿ ನೀಡಲಿದ್ದಾರೆ. ಅಗ ಮತ್ತಷ್ಟು ವಿವರಗಳು ಕಾರ್ಯಕರ್ತರಿಗೆ ಲಭ್ಯವಾಗಲಿವೆ. ರಾಷ್ಟ್ರೀಯ ನಾಯಕರ ನಿರೀಕ್ಷೆಗೆ ತಕ್ಕಂತೆ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಬಿಜೆಪಿಗೆ ಸೇರ್ಪಡೆಗೊಳ್ಳಲು ಬಹಳಷ್ಟು ಮಂದಿ ಮುಂದಾಗಿದ್ದಾರೆ. ಬೃಹತ್ ಪ್ರಮಾಣದಲ್ಲಿ ಬೇರೆ ಪಕ್ಷಗಳ ಮುಖಂಡರು ಬಿಜೆಪಿಗೆ ಬರಲಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್‌ನಿಂದ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾಗುವ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಹಾಗಂತ ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೆ ಹಿಂದೇಟು ಹಾಕಬೇಕಾದ ಅಗತ್ಯ ಇಲ್ಲ. ಕಾರ್ಯಕರ್ತರ ಮತ್ತು ಸ್ಥಳೀಯ ನಾಯಕರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಹೊಸಬರನ್ನು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ಕೊಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿ/ಎಸ್‌ಟಿ ಸಮುದಾಯದವರು ತಮ್ಮ ಜೇಬಿನಲ್ಲಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ಇತ್ತೀಚೆಗೆ ಬಿಜೆಪಿ ನಡೆಸಿದ ವಿಸ್ತಾರಕ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿದ ವೇಳೆ ಈ ಸತ್ಯ ಬಯಲಾಗಿದೆ. ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ. ಸರ್ಕಾರದ ಹಗರಣಗಳ ದಾಖಲೆಗಳನ್ನು ಪಡೆದುಕೊಂಡು ಬಹಿರಂಗ ಮಾಡುವ ಮೂಲಕ ರಾಜ್ಯದ ಜನತೆಗೆ ತಿಳಿಸಬೇಕು. ಕಾಂಗ್ರೆಸ್ ಸರ್ಕಾರವು ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಇದನ್ನು ಮರೆಮಾಚಿಕೊಳ್ಳಲು ಜಾತಿ-ಜಾತಿಗಳ ನಡುವೆ ಒಡಕು ಉಂಟು ಮಾಡಲಾಗುತ್ತಿದೆ. ಅನಗತ್ಯವಾಗಿ ವೀರಶೈವ-ಲಿಂಗಾಯತ ಧರ್ಮವನ್ನು ಕೆಣಕಿದೆ. ಕನ್ನಡ ಧ್ವಜದಲ್ಲಿಯೂ ವಿವಾದ ಸೃಷ್ಟಿಸಿದೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಜೈಲಿನ ಭಷ್ಟಾಚಾರವನ್ನು ಬಯಲಿಗೆಳೆದ ಪೊಲೀಸ್ ಅಧಿಕಾರಿ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆಯ ನೀಡಿದೆ. ಭ್ರಷ್ಟರಿಗೆ ರಕ್ಷಣೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ನಡೆಸಿದ ಅಂತಾರಾಷ್ಟ್ರೀಯ ಅಂಬೇಡ್ಕರ್ ಸಮ್ಮೇಳನದಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿದೆ. ವಿಚಾರಣ ಸಂಕಿರಣದ ಹೆಸರಲ್ಲಿ ಹಣ ಲೂಟಿ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಭಾವದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಇಡೀ ಜಗತ್ತೇ ಪ್ರಧಾನಿ ಅವರ ಸಾಧನೆಯನ್ನು ಮೆಚ್ಚಿದೆ ಎಂದರು.