ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದ ಜಮೀನೊಂದರಲ್ಲಿ ಹುತ್ತವನ್ನು ಅಗೆದಾಗ, ಮೊಹರಂ ಹಬ್ಬದ ಸಂದರ್ಭದಲ್ಲಿ ಬಳಸುವ ಪವಿತ್ರ ಅಲಾಯಿ ದೇವರುಗಳು ಪತ್ತೆಯಾಗಿವೆ. ಆರಂಭದಲ್ಲಿ ಇದನ್ನು ಮೂಢನಂಬಿಕೆ ಎಂದು ನಿರ್ಲಕ್ಷಿಸಿದ್ದ ಗ್ರಾಮಸ್ಥರು, ಈ ಪವಾಡವನ್ನು ಕಣ್ಣಾರೆ ಕಂಡು ಇದೀಗ ಅಚ್ಚರಿಗೊಂಡಿದ್ದಾರೆ
ಕೊಪ್ಪಳ (ಜ.22): ಹುತ್ತವೊಂದನ್ನು ಅಗೆದಾಗ ಅದರೊಳಗೆ ಅಲಾಯಿ ದೇವರುಗಳು ಪತ್ತೆಯಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದ ಸಮೀಪವಿರುವ ಜಮೀನೊಂದರಲ್ಲಿ ನಡೆದಿದ್ದು, ಇದೀಗ ಇಡೀ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಯಮನೂರಪ್ಪ ಎಂಬುವವರ ಜಮೀನಿನಲ್ಲಿ ಕಂಡ ಪವಾಡ
ಬಾದಿಮನಾಳ ಗ್ರಾಮದ ನಿವಾಸಿ ಯಮನೂರಪ್ಪ ಗೊಣ್ಣಾಗರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಪವಾಡ ನಡೆದಿದೆ. ಜಮೀನಿನ ಒಂದು ಮೂಲೆಯಲ್ಲಿದ್ದ ಹುತ್ತದಲ್ಲಿ ದೇವರುಗಳು ಇವೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ, ಜನರು ಅದನ್ನು ಮೂಢನಂಬಿಕೆ ಎಂದು ನಿರ್ಲಕ್ಷ್ಯಿಸಿದ್ದರು.
ಹುತ್ತ ಅಗೆದಾಗ ಕಂಡವು ಅಲಾಯಿ ದೇವರುಗಳು!
ಕೆಲವರು ಹುತ್ತದಲ್ಲಿ ದೇವರಿದೆ ಎಂಬುದು ಕೇವಲ ಮೂಢನಂಬಿಕೆ ಎಂದು ವಾದಿಸುತ್ತಿದ್ದರು. ಆದರೆ ಕುತೂಹಲ ತಾಳಲಾರದೆ ಇಂದು ಜಮೀನಿನ ಮಾಲೀಕರು ಹಾಗೂ ಗ್ರಾಮಸ್ಥರು ಸೇರಿ ಪಿಕಾಸಿಯಿಂದ ಹುತ್ತವನ್ನು ಅಗೆದಿದ್ದಾರೆ. ಹುತ್ತದ ಮಣ್ಣು ಸರಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಅಚ್ಚರಿಗೊಂಡವು. ಒಳಗಿನಿಂದ ಅಲಾಯಿ ದೇವರುಗಳು (ಮೊಹರಂ ಹಬ್ಬದ ಸಂದರ್ಭದಲ್ಲಿ ಬಳಸುವ ಪವಿತ್ರ ಸಂಕೇತಗಳು) ಪ್ರತ್ಯಕ್ಷವಾಗಿವೆ.
ಗ್ರಾಮಸ್ಥರಲ್ಲಿ ಮೂಡಿದ ಅಪಾರ ಭಕ್ತಿ
ಹಿಂದೆ ಇದನ್ನು ಮೂಢನಂಬಿಕೆ ಎಂದು ಕರೆದಿದ್ದವರು ಈಗ ಕಣ್ಣಾರೆ ಕಂಡ ದೃಶ್ಯಕ್ಕೆ ಬೆರಗಾಗಿದ್ದಾರೆ. ಹುತ್ತದ ಆಳದಲ್ಲಿ ಈ ದೇವರುಗಳು ಹೇಗೆ ಬಂದವು ಎಂಬುದು ಈಗಲೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.


