Asianet Suvarna News Asianet Suvarna News

ಖಾಸಗಿ ಆಸ್ಪತ್ರೆಗಳ ಕಡಿವಾಣಕ್ಕೆ ಕಾಯ್ದೆ

ವಿಧೇಯಕದಲ್ಲಿ ಏನಿದೆ?

ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ
ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ 5 ಲಕ್ಷ ರು.ವರೆಗೆ ದಂಡ, 3 ವರ್ಷಗಳವರೆಗೆ ಜೈಲು
ತುರ್ತು ಸಂದರ್ಭದಲ್ಲಿ ರೋಗಿಯಿಂದ ಮುಂಗಡ ಪಾವತಿಗೆ ಒತ್ತಾಯಿಸುವಂತಿಲ್ಲ
ರೋಗಿಯ ಮೃತದೇಹ ಹಸ್ತಾಂತರಿಸುವಾಗ ಬಾಕಿ ಮೊತ್ತಕ್ಕೆ ಒತ್ತಾಯಿಸುವಂತಿಲ್ಲ

Bill to regulate private hospitals

ಬೆಂಗಳೂರು: ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಇನ್ನು ಮುಂದೆ ಎಲ್ಲ ವರ್ಗಗಳ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ರಾಜ್ಯ ಸರ್ಕಾರ ನಿಗದಿ ಮಾಡಿದ ಶುಲ್ಕಗಳನ್ನೇ ವಸೂಲಿ ಮಾಡಬೇಕು. ಇಲ್ಲದಿದ್ದಲ್ಲಿ 25 ಸಾವಿರ ರು.ಗಳಿಂದ 5 ಲಕ್ಷ ರು.ಗಳವರೆಗೆ ದಂಡ ಮತ್ತು ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.

ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಶಿಫಾರಸು ಆಧರಿಸಿ ಹೊಸ ಕಾಯ್ದೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017ನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.

ಈ ವಿಧೇಯಕ ಕುರಿತಂತೆ ಪ್ರಸಕ್ತ ಅಧಿವೇಶನದಲ್ಲಿ ಚರ್ಚೆ ನಡೆದು ಅಂಗೀಕಾರಗೊಂಡರೆ ಇನ್ನುಮುಂದೆ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸಂಗ್ರಹಿಸಬೇಕಾದ ಶುಲ್ಕ ಮತ್ತು ಅವುಗಳನ್ನು ನಿಗದಿ ಮಾಡುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ದಕ್ಕಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿದರು. ಈ ವಿಧೇಯಕದ ಅನ್ವಯ-2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಕ್ಕೆ ವ್ಯಾಪಕ ತಿದ್ದುಪಡಿ ಆಗಲಿದೆ.

ಪ್ರಮುಖವಾಗಿ ಎಲ್ಲ ಬಗೆಯ ವೈದ್ಯಕೀಯ ಚಿಕಿತ್ಸೆಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರ ಗುರುತು ಮಾಡಿದ ದರಗಳನ್ನೇ ಆಸ್ಪತ್ರೆಗಳು ವಸೂಲಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ನಿಗದಿ ಮಾಡಿದ ವೈದ್ಯಕೀಯ ಶುಲ್ಕದ ಕುರಿತಂತೆ ಖಾಸಗಿ ಆಸ್ಪತ್ರೆಗಳು ಆಸ್ಪತ್ರೆಯ ಪ್ರಮುಖ ಸ್ಥಳದಲ್ಲಿ ಅಥವಾ ಸ್ವಾಗತ ಕೋಣೆಯಲ್ಲಿ ಸೂಚನಾ ಫಲಕ ಅಳವಡಿಸಬೇಕು. ತಪಾಸಣೆ, ಹಾಸಿಗೆ ವೆಚ್ಚ, ಶಸ್ತ್ರಚಿಕಿತ್ಸೆ ಕೊಠಡಿ ವೆಚ್ಚ, ತೀವ್ರ ನಿಗಾ ಘಟಕ, ರೋಗಿಗೆ ವೆಂಟಿಲೇಟರ್‌, ಇಂಪ್ಲಾಂಟ್‌, ಸಮಾಲೋಚನೆ ಮತ್ತು ಅಂತಹುದೇ ಪರೀಕ್ಷೆ ಮತ್ತು ಕಾರ್ಯವಿಧಾನಗಳು ಮತ್ತು ಯಾವುದೇ ಹೆಚ್ಚುವರಿ ಚಿಕಿತ್ಸೆಗಳಿಗೆ ಸರ್ಕಾರ ನಿಗದಿಪಡಿಸಿದ ದರವನ್ನೇ ಪಡೆಯಬೇಕು. ವಿವಿಧ ತಪಾಸಣೆಗಳ ಪ್ಯಾಕೇಜ್‌ ದರಗಳಿಗೂ ಇದು ಅನ್ವಯಿಸುತ್ತದೆ. ಅಲ್ಲದೇ ರೋಗಿಗೆ ಅಥವಾ ರೋಗಿಯ ಸಹಾಯಕರಿಗೆ ಕ್ರಮಬದ್ಧವಾದ ಅಂದಾಜುಗಳನ್ನು ಚಿಕಿತ್ಸೆಯ ಪ್ರಾರಂಭದಲ್ಲಿ ಅಥವಾ ಚಿಕಿತ್ಸೆ ನಡೆಯುತ್ತಿರುವಾಗ ಒದಗಿಸಲೇಬೇಕು ಮತ್ತು ಅಂತಿಮ ಬಿಲ್‌ ಕೂಡ ಅಂದಾಜುಗಳನ್ನು ಮೀರುವಂತಿಲ್ಲ.

ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಗೆ ಸರ್ಕಾರ ದರಗಳನ್ನು ನಿಗದಿಪಡಿಸುವಾಗ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬೇರೆ ಬೇರೆ ವರ್ಗದ ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಲಿದೆ. ಅಂದರೆ ಆಯಾ ಆಸ್ಪತ್ರೆಗಳ ಗುಣಮಟ್ಟ, ಸಾಮರ್ಥ್ಯ ಆಧರಿಸಿ ದರಗಳನ್ನು ನಿಗದಿ ಮಾಡಲಿದೆ.

ಇನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಯು ರೋಗಿ ಅಥವಾ ರೋಗಿಗಳ ಸಹಾಯಕರಿಂದ ಮುಂಗಡ ಹಣ ಕಟ್ಟುವಂತೆ ಒತ್ತಾಯಿಸುವಂತಿಲ್ಲ. ಅಲ್ಲದೇ ಮುಂಗಡ ಹಣಕ್ಕಾಗಿ ಒತ್ತಾಯಿಸಿ ಚಿಕಿತ್ಸೆ ನಿರಾಕರಿಸುವಂತಿಲ್ಲ. ರೋಗಿಯ ಜೀವವನ್ನು ರಕ್ಷಿಸಲು ಅಗತ್ಯವಾದ ಕ್ರಮವನ್ನು ಆಸ್ಪತ್ರೆ ಕೈಗೊಳ್ಳಲೇಬೇಕು. ಇದಲ್ಲದೇ ಆಸ್ಪತ್ರೆಯಲ್ಲಿ ಯಾವುದೇ ರೋಗಿ ಮೃತಪಟ್ಟಾಗ ಆತನ ಮೃತದೇಹ ಹಸ್ತಾಂತರಿಸಲು ಬಾಕಿ ಬಿಲ್‌ ಪಾವತಿ ಮಾಡುವಂತೆ ಆಸ್ಪತ್ರೆ ಒತ್ತಾಯ ಮಾಡದೇ ತಕ್ಷಣವೇ ಮೃತದೇಹವನ್ನು ಕೊಡಬೇಕು. ಕಾಲಕ್ರಮದಲ್ಲಿ ಅದನ್ನು ಮೃತನ ಪ್ರತಿನಿಧಿಗಳಿಂದ ವಸೂಲಿ ಮಾಡಿಕೊಳ್ಳಬೇಕು.

ತಿದ್ದುಪಡಿ ಅನ್ವಯ ಜಿಲ್ಲಾ ಅಥವಾ ಮಹಾನಗರ ಕುಂದುಕೊರತೆ ಪರಿಹಾರ ಸಮಿತಿ ರಚನೆಯಾಗಲಿದೆ. ಈ ಸಮಿತಿಗೆ ಜಿ.ಪಂ. ಸಿಇಓ ಅಧ್ಯಕ್ಷರಾಗಿದ್ದು, ಜಿಲ್ಲೆಯ ಎಸ್‌ಪಿ, ಖಾಸಗಿ ವೈದ್ಯಕೀಯ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು, ಜಿಲ್ಲಾ ಸರ್ಜನ್‌, ಸರ್ಕಾರಿ ಅಭಿಯೋಜಕ ಮತ್ತು ರಾಜ್ಯ ಸರ್ಕಾರ ನೇಮಕ ಮಾಡುವ ಮಹಿಳಾ ಪ್ರತಿನಿಧಿ ಸದಸ್ಯರಾಗಿರುತ್ತಾರೆ. ಸಮಿತಿಯು ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳ ನೋಂದಣಿಯಲ್ಲಿ ಷರತ್ತುಗಳು ಪಾಲನೆಯಾಗಿ ವೆಯೇ ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಪಾಲನೆ ಆಗದಿದ್ದಲ್ಲಿ ಪಾಲಿಸುವಂತೆ ಆಸ್ಪತ್ರೆಗೆ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ನೋಂದಣಿ ಪ್ರಾಧಿಕಾರಕ್ಕೆ ವರದಿ ನೀಡಬೇಕು. ಈ ಸಮಿತಿಗೆ ಸಿವಿಲ್‌ ನ್ಯಾಯಾಲಯದ ಅಧಿಕಾರ ನೀಡಲಾಗುತ್ತಿದೆ.

ಲೈಸನ್ಸ್‌ 3 ವರ್ಷಕ್ಕೆ ಮಾತ್ರ: ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನೋಂದಣಿ ಪ್ರಾಧಿಕಾರ ರಚನೆಯಾಗಲಿದೆ. ಪ್ರಾಧಿಕಾರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಸದಸ್ಯ ಕಾರ್ಯದರ್ಶಿ ಯಾಗಿದ್ದು, ಜಿಲ್ಲಾ ಆಯುಷ್‌ ಅಧಿಕಾರಿ ಮತ್ತು ಅಧ್ಯಕ್ಷರು ನಾಮನಿರ್ದೇಶನ ಮಾಡಿದ ವೈದ್ಯಕೀಯ ಸಂಘದ ಇಬ್ಬರು ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಆಸ್ಪತ್ರೆಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನೋಂದಣಿ ಪ್ರಾಧಿಕಾರ ಒಂದು ತಿಂಗಳೊಳಗೆ ನೋಂದಣಿ ಮಾಡಬಹುದು. ಈ ನೋಂದಣಿ ಮುಂದಿನ ಮೂರು ವರ್ಷಗಳವರೆಗೆ ಮಾತ್ರ ಅನ್ವಯಿಸುತ್ತದೆ. ಈ ಹಿಂದೆ ಐದು ವರ್ಷಗಳ ನೋಂದಣಿ ನೀಡಲಾಗುತ್ತಿತ್ತು. ನೋಂದಣಿ ಇಲ್ಲದೇ ಆಸ್ಪತ್ರೆ ನಡೆಸಿದಲ್ಲಿ ಇನ್ನು ಮುಂದೆ 10 ಸಾವಿರ ರು.ಗೆ ಬದಲಾಗಿ 5 ಲಕ್ಷ ರು. ದಂಡ ವಿಧಿಸಲಾಗುವುದು. ನೋಂದಣಿ ಷರತ್ತು ಉಲ್ಲಂಘಿಸಿ ಆಸ್ಪತ್ರೆ ನಡೆಸುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರು.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುವುದು. ಇದಲ್ಲದೇ ಇನ್ನುಮುಂದೆ ಖಾಸಗಿ ವೈದ್ಯಕೀಯ ರೋಗ ಪತ್ತೆ ಪ್ರಯೋಗಾಲಯವು ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ದೂರ ಇರಬೇಕು ಎಂಬ ನಿಯಮವನ್ನೂ ಜಾರಿಗೆ ತರಲಾಗುತ್ತಿದೆ.

ತಜ್ಞರ ಸಮಿತಿ ರಚನೆ: ರಾಜ್ಯದ ಪ್ರತಿಯೊಂದು ಖಾಸಗಿ ಆಸ್ಪತ್ರೆಯ ಗುಣಮಟ್ಟ, ಸಿಬ್ಬಂದಿ, ಸಾಮರ್ಥ್ಯದ ಆಧಾರದ ಮೇಲೆ ಆಯಾ ಆಸ್ಪತ್ರೆಗಳ ದರಗಳನ್ನು ನಿಗದಿಪಡಿಸಲು ಈ ಕಾಯ್ದೆಯಡಿ ತಜ್ಞರ ಸಮಿತಿ ರಚಿಸಲಾಗುತ್ತದೆ. ಆಯಾ ಆಸ್ಪತ್ರೆಗಳ ದರ ನಿಗದಿ ಮಾಡುವುದು, ಆಸ್ಪತ್ರೆಯ ಮೂಲಸೌಕರ್ಯ, ಸಿಬ್ಬಂದಿ, ಆಡಿಟ್‌ ಮುಂತಾದವುಗಳನ್ನು ಪರಿಶೀಲಿಸಿ ದರ ನಿಗದಿಗೆ ಪರಿಗಣಿಸುವುದು ಸಮಿತಿಯ ಕೆಲಸವಾಗಿದೆ. ಅಲ್ಲದೇ ಈ ಸಮಿತಿಯು ತನ್ನ ಕಾರ್ಯ ನಿರ್ವಹಣೆಗಾಗಿ ಕೆಲವು ಅಡ್‌-ಹಾಕ್‌ ಸಮಿತಿಗಳನ್ನೂ ನೇಮಕ ಮಾಡಿಕೊಳ್ಳಬಹುದು.

ರೋಗಿಗಳು ಮತ್ತು ಆಸ್ಪತ್ರೆಯ ಹಕ್ಕುಗಳು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ಮೂಲಕ ಜಾರಿಯಾಗಲಿರುವ ಹೊಸ ಕಾಯ್ದೆಯಲ್ಲಿ ರೋಗಿ ಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೆಲವು ಹಕ್ಕುಗಳನ್ನೂ ಮತ್ತು ಹೊಣೆಗಾರಿಕೆಗಳನ್ನೂ ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ. ರೋಗಿಗಳಿಗೆ ಆತನ ಸ್ವಯಂ ರಕ್ಷಣೆ, ವೈಯಕ್ತಿಕ ಹಿನ್ನೆಲೆ ಗಣನೆಗೆ ತೆಗೆದುಕೊಳ್ಳದೇ ಚಿಕಿತ್ಸೆ ಪಡೆಯುವ ಹಕ್ಕು, ವೈದ್ಯರಿಂದ ತನಗೆ ಬೇಕಾದ ಗೌಪ್ಯತೆ ಮತ್ತು ಗೌರವ ಕಾಪಾಡಿಕೊಳ್ಳುವುದು, ಅಂದರೆ ಪರೀಕ್ಷೆ ಮತ್ತು ಚಿಕಿತ್ಸೆ ಅವಧಿಯಲ್ಲಿ ಖಾಸಗಿತನ, ತನ್ನ ಮನದಿಂಗಿತವನ್ನು ಹೇಳಿಕೊಳ್ಳುವುದು, ಅದಕ್ಕೆ ವೈದ್ಯರು ತಮ್ಮ ಸಮಯದ ಅಭಾವ ಹೇಳದೇ ಇರುವುದು, ರೋಗಿಯ ವೈದ್ಯಕೀಯ ಸ್ಥಿತಿಯ ಕುರಿತು ಗೌಪ್ಯತೆ ಕಾಪಾಡಿ ಕೊಳ್ಳುವುದು, ರೋಗಿ ಅಥವಾ ಆತನ ಸಹಾಯಕನಿಗೆ ಅರ್ಥವಾಗುವ ಭಾಷೆಯಲ್ಲಿ ವೈದ್ಯರಿಂದ ಮಾಹಿತಿ ಪಡೆಯುವುದು, ಔಷಧ-ಚಿಕಿತ್ಸೆ ಚೀಟಿಗಳನ್ನು ತನಗೆ ಗೊತ್ತಾಗುವಂತೆ ವೈದ್ಯರಿಂದ ಬರೆಸಿಕೊಳ್ಳುವುದು, ಚಿಕಿತ್ಸೆಯ ವೆಚ್ಚ, ಔಷಧ ವಿವರದ ಸಂಪೂರ್ಣ ಮಾಹಿತಿ, ವೈದ್ಯಕೀಯ ಚಿಕಿತ್ಸೆ ಕುರಿತು ಎರಡನೇ ಅಭಿಪ್ರಾಯ ಪಡೆಯುವುದು, ಚಿಕಿತ್ಸೆಗೆ ಆಯ್ಕೆಗಳನ್ನು ಪಡೆಯುವ ಹಕ್ಕನ್ನೂ ನೀಡಲಾಗಿದೆ.

ಇದೇ ವೇಳೆ ರೋಗಿಯು ತನ್ನ ವೈದ್ಯಕೀಯ ಇತಿಹಾಸವನ್ನು ಸಂಬಂಧಪಟ್ಟವೈದ್ಯರೆದುರು ಬಹಿರಂಗಪಡಿಸಬೇಕು, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಪ್ರದರ್ಶಿಸುವುದು ರೋಗಿಯ ಹೊಣೆಯಾಗಿದೆ. ವೈದ್ಯರ ಅಥವಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು, ತೊಂದರೆ ಕೊಡುವುದು, ನಿಂದಿಸುವುದು, ಆಸ್ಪತ್ರೆ ಸ್ವತ್ತಿಗೆ ಹಾನಿ ಮಾಡುವುದನ್ನು ನಿಷೇಧಿಸಲಾಗಿದೆ. ಆಸ್ಪತ್ರೆಯ ನಿಯಮಗಳಿಗೆ ಬದ್ಧರಾಗಿರುವುದು , ಬಿಲ್‌ ವಿಚಾರದಲ್ಲಿ ವೈದ್ಯರೊಂದಿಗೆ ಚರ್ಚಿಸುವುದು, ವಂಚನೆ ಅಥವಾ ತಪ್ಪಾದ ಕೆಲಸದ ಬಗೆಗೆ ವರದಿ ನೀಡುವುದು ಹೀಗೆ ಕೆಲವು ಹೊಣೆಗಾರಿಕೆಯನ್ನು ರೋಗಿಗಳು ಪಾಲಿಸಬೇಕು. ಇನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ವಿಧಿಸಿರುವ ಹೊಣೆಗಾರಿಕೆಗಳೆಂದರೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ. ಕಚೇರಿ ಸಂದರ್ಶನಗಳು, ಕಾರ್ಯವಿಧಾನ, ಪರೀಕ್ಷೆ, ಶಸ್ತ್ರ ಚಿಕಿತ್ಸೆಗಾಗಿ ಮುದ್ರಿತ ಅನುಸೂಚಿ ಒದಗಿಸುವುದು, ರೋಗಪತ್ತೆ ಕ್ರಮಗಳು ಅಥವಾ ಚಿಕಿತ್ಸೆಗಳನ್ನು ನೆರವೇರಿಸುವಲ್ಲಿ ರೋಗಿಯ ಅರ್ಹತೆಗಳ ಬಗ್ಗೆ ಮಾಹಿತಿ, ರೋಗಿ ಸ್ನೇಹಿ ವರ್ತನೆ, ರೋಗಿಗಳ ಭೇಟಿಗೆ ವೈದ್ಯರ ಸಮಯ ನಿಗದಿಪಡಿಸುವುದು, ರೋಗಿಗಳೊಂದಿಗೆ ಪರಿಣಾಮಕಾರಿ ಸಂವಹನ ಮತ್ತು ರೋಗಿಗಳ ಸಂಪೂರ್ಣ ಹಕ್ಕುಗಳನ್ನು ಕಾಯ್ದುಕೊಳ್ಳುವುದಾಗಿದೆ.

Follow Us:
Download App:
  • android
  • ios