ಯಶ್‌ ಅಭಿನಯದ ಕೆಜಿಎಫ್‌ ಚಿತ್ರವನ್ನು ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹೊಗಳಿ ಪೋಸ್ಟ್‌ ಮಾಡಿರುವುದು ವಿವಾದಕ್ಕೀಡಾದ ಬೆನ್ನಲ್ಲೇ ಅದನ್ನು ಡಿಲೀಟ್‌ ಮಾಡಿದ್ದಾರೆ. 

ಬೆಂಗಳೂರು : ನಟ ಯಶ್‌ ಅಭಿನಯದ ಕೆಜಿಎಫ್‌ ಚಿತ್ರವನ್ನು ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹೊಗಳಿ ಪೋಸ್ಟ್‌ ಮಾಡಿರುವುದು ವಿವಾದಕ್ಕೀಡಾದ ಬೆನ್ನಲ್ಲೇ ಅದನ್ನು ಡಿಲೀಟ್‌ ಮಾಡಿರುವ ಬೆಳವಣಿಗೆ ಮಂಗಳವಾರ ನಡೆದಿದೆ.

ನೆತ್ತರು ಹರಿಸುವ ಚಿತ್ರವನ್ನು ಪೊಲೀಸರು ಹೊಗಳುವುದು ರೌಡಿಸಂ ಅನ್ನು ಬೆಂಬಲಿಸಿದಂತಾಗುವುದಿಲ್ಲವೇ? ಪೊಲೀಸರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಈ ರೀತಿ ಹೊಗಳಿರುವುದು ಎಷ್ಟುಸರಿ ಎಂಬೆಲ್ಲಾ ಪ್ರಶ್ನೆಗಳು ತೂರಿ ಬಂದಿದ್ದು, ಆಕ್ಷೇಪಗಳು ವ್ಯಕ್ತವಾಗಿದೆ. ಇಂತಹದೊಂದು ವಿವಾದದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪೋಸ್ಟನ್ನು ಪೊಲೀಸರು ತೆಗೆದು ಹಾಕಿದ್ದಾರೆ.

ಟ್ವೀಟರ್‌ನಲ್ಲಿ ಏನಿದೆ:  ‘ನಮ್ಮ ಭಾಷೆಯ ಸಿನಿಮಾವೊಂದು ಕನ್ನಡದ ಗಡಿ ದಾಟಿ ಜಗತ್ತಿನೆಲ್ಲೆಡೆ ಜನಮನ್ನಣೆ ಪಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಕನ್ನಡ ಚಿತ್ರ ಜಗತ್ತಿನ ತಾಂತ್ರಿಕತೆಯ ತಾಕತ್ತನ್ನು ಜಗತ್ತಿಗೆ ತೋರಿಸಿದ ತಂಡಕ್ಕೆ ಅಭಿನಂದನೆಗಳು’ ಎಂದು ಮಂಗಳವಾರ ಬೆಳಗ್ಗೆ ಪೊಲೀಸರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಹೊಗಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್‌ ಸಾಮಾಜಿಕ ಜಾಲತಾಣ ನಿರ್ವಹಣೆಯ ಹೊಣೆ ಹೊತ್ತಿರುವ ಎಸಿಪಿ ಅಜಯ್‌, ಪೊಲೀಸ್‌ ಫೇಸ್‌ಬುಕ್‌ ಖಾತೆಯಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಸಹ ಚಿತ್ರವನ್ನು ನೋಡಿಲ್ಲ. ಈ ಪೋಸ್ಟ್‌ ಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಟ್ವೀಟರ್‌ನಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆ ಮಂಗಳವಾರ ತಡರಾತ್ರಿ ಪೊಲೀಸರು ಟ್ವೀಟರ್‌ ಖಾತೆಯಲ್ಲಿ ಚಿತ್ರವನ್ನು ಹೊಗಳಿದ್ದ ಪೋಸ್ಟನ್ನು ಡಿಲೀಟ್‌ ಮಾಡಿದರು.