Asianet Suvarna News Asianet Suvarna News

ಭರ್ಜರಿ ಬೇಟೆ : ಗುಂಡಿಕ್ಕಿ 11 ದಂಧೆಕೋರರ ಸೆರೆ!

ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು 11 ಮಂದಿಗೆ ಗುಂಡಿಕ್ಕಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರೂ ಕೂಡ ಆಂಧ್ರದಿಂದ ಗಾಂಜಾ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಗಳಾಗಿದ್ದರು. 

Bengaluru Police Arrest 11 Drug Peddlers
Author
Bengaluru, First Published Aug 22, 2018, 8:30 AM IST

ಬೆಂಗಳೂರು :  ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕುರ್ಕುರೆ, ಲೇಸ್‌ನಂತಹ ತಿನಿಸುಗಳ ಪ್ಯಾಕೆಟ್‌ನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ತಂಡವೊಂದನ್ನು ಬೆಂಗಳೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಆಂಧ್ರಪ್ರದೇಶದಿಂದ ಈ ಗ್ಯಾಂಗ್‌ ಬೆಂಗಳೂರಿಗೆ ಗಾಂಜಾ ಪೂರೈಕೆ ಮಾಡುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಾರತ್‌ಹಳ್ಳಿ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಕಿಂಗ್‌ಪಿನ್‌ಗಳಿಗೆ ಗುಂಡೇಟಿನಿಂದ ಗಾಯಗಳಾಗಿವೆ. ಸಂಘರ್ಷದಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.

ದಂಧೆಯ ಪ್ರಮುಖ ಕಿಂಗ್‌ಪಿನ್‌ಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಯ್ಯದ್‌ ಫಾರೂಕ್‌ (48) ಹಾಗೂ ಕೆ.ಆರ್‌.ಪುರದ ಸಾದಿಕ್‌ ಶರೀಫ್‌ (39) ಎಂಬುವರ ಕಾಲಿಗೆ ಗುಂಡು ತಗುಲಿದೆ. ಮೊಹಿದ್ದುರ್‌ ಶೇಖ್‌ (25), ಮಹಮ್ಮದ್‌ ಬಿಲಾಲ್‌ (30), ಹಫೀಜ್‌ ಉಲ್‌ (35), ಹಫೀಜ್‌ ಉಲ್‌ ಶೇಖ್‌ (35), ಮಹಮ್ಮದ್‌ ಶುಕೂರ್‌ (22), ಮಹಮ್ಮದ್‌ ಅಸ್ಲಾಂ (22), ಮಹಮ್ಮದ್‌ ಶುಹಾಕ್‌ (25), ಹಫೀಜ್‌ ಉಲ್‌ (32) ಬಂಧಿತ ಇತರ ಗಾಂಜಾ ವ್ಯಾಪಾರಿಗಳು. ಘಟನೆಯಲ್ಲಿ ಮಾರತ್‌ಹಳ್ಳಿ ಸಬ್‌ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ರವಿಶಂಕರ್‌ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಿಂದ ಒಟ್ಟು ಐದು ಕೆ.ಜಿ.ಯಷ್ಟುಗಾಂಜಾ ಜಪ್ತಿ ಮಾಡಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದ್ದಾರೆ.

ಪರಂ ಸೂಚನೆ ಬೆನ್ನಲ್ಲೇ ದಾಳಿ:

ಬೆಂಗಳೂರಿನಲ್ಲಿ ಮಾದಕ ಜಾಲ ದಂಧೆ ವ್ಯಾಪಕವಾಗಿದ್ದು, ಅದರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನಡೆಸಿದ್ದರು. ನಗರ ಪೊಲೀಸ್‌ ಆಯುಕ್ತರ ಸೂಚನೆಯಂತೆ ವೈಟ್‌ಫೀಲ್ಡ್‌ ವಿಭಾಗದಲ್ಲಿ ದಂಧೆಕೋರರ ಪತ್ತೆಗೆ ಡಿಸಿಪಿ ಅಬ್ದುಲ್‌ ಅಹದ್‌ ಪ್ರತ್ಯೇಕ ತಂಡ ರಚಿಸಿದ್ದರು.

ಅಗತ್ಯ ಮಾಹಿತಿ ಕಲೆ ಹಾಕಿದ ಇನ್ಸ್‌ಪೆಕ್ಟರ್‌ ಸಾದಿಕ್‌ ಪಾಷಾ ನೇತೃತ್ವದ ತಂಡ ಆಂಧ್ರಪ್ರದೇಶದಿಂದ ಗಾಂಜಾ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಕೆಲವರನ್ನು ಹಿಡಿದು ತೀವ್ರ ವಿಚಾರಣೆ ನಡೆಸಿದಾಗ ದಂಧೆಯ ಕಿಂಗ್‌ಪಿನ್‌ಗಳಾದ ಸಯ್ಯದ್‌ ಫಾರೂಕ್‌ ಮತ್ತು ಸಾದಿಕ್‌ ಶರೀಫ್‌ ಬಗ್ಗೆ ಬಾಯ್ಬಿಟ್ಟಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.

ಮಂಗಳವಾರ ಸಂಜೆ 6.30ರ ಸುಮಾರಿಗೆ ದಂಧೆಯ ಪ್ರಮುಖ ಆರೋಪಿಗಳಾದ ಸಯ್ಯದ್‌ ಫಾರೂಕ್‌ ಮತ್ತು ಸಾದಿಕ್‌ ಶರೀಫ್‌ ಎಚ್‌ಎಎಲ್‌ ಠಾಣಾ ವ್ಯಾಪ್ತಿಯ ಬೋರ್‌ವೆಲ್‌ ಜಂಕ್ಷನ್‌ ಬಳಿ ಪಲ್ಸರ್‌ ಬೈಕ್‌ನಲ್ಲಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಮಾರತ್‌ಹಳ್ಳಿ ಇನ್ಸ್‌ಪೆಕ್ಟರ್‌ ಸಾದಿಕ್‌ ಪಾಷಾ ತಮ್ಮ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ್ದರು. ಸಬ್‌ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌, ಕಾನ್ಸ್‌ಟೇಬಲ್‌ ರವಿಶಂಕರ್‌ ಆರೋಪಿಗಳನ್ನು ಅಡ್ಡಗಟ್ಟಿಹಿಡಿದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಪಿಎಸ್‌ಐ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ಮೇಲೆ ದಂಧೆಕೋರರು ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಗಂಭೀರತೆ ಅರಿತ ಇನ್ಸ್‌ಪೆಕ್ಟರ್‌ ಸಾದಿಕ್‌ ಪಾಷಾ ಮತ್ತು ಸಬ್‌ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಕುರ್ಕುರೆ ಮತ್ತು ಲೇಸ್‌ ಪ್ಯಾಕೆಟ್‌ನಲ್ಲಿದ್ದ ಸುಮಾರು 2 ಕೆ.ಜಿ.ಗಾಂಜಾ ಜಪ್ತಿ ಮಾಡಲಾಗಿದೆ.

ಡ್ರಗ್ಸ್‌ ಬಗ್ಗೆ ಮಾಹಿತಿ ನೀಡಲು ಪೆಟ್ಟಿಗೆ:

ಡ್ರಗ್ಸ್‌ ದಂಧೆಕೋರರ ಬಗ್ಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು. ದಂಧೆಕೋರರ ಬಗ್ಗೆ ಮಾಹಿತಿ ನೀಡಲು ವೈಟ್‌ಫೀಲ್ಡ್‌ ವಿಭಾಗದ ಎಲ್ಲಾ ಪೊಲೀಸ್‌ ಠಾಣೆಗಳ ಬಳಿ ‘ಮಾಹಿತಿ ಪೆಟ್ಟಿಗೆ’ ಇಡಲಾಗಿತ್ತು. ಇದರಲ್ಲಿ ವ್ಯಸನಿಗಳ ಬಗ್ಗೆ ಹಲವು ಮಾಹಿತಿ ಕೂಡ ಲಭ್ಯವಾಗಿತ್ತು.

ಆಂಧ್ರದಲ್ಲೂ ಇಬ್ಬರ ಸೆರೆ

ಮಾದಕ ವಸ್ತು ಗಾಂಜಾ ಪೂರೈಕೆಯ ಜಾಲದ ಬೇರು ಆಂಧ್ರಪ್ರದೇಶದಿಂದ ಶುರುವಾಗುತ್ತದೆ. ಆಂಧ್ರಪ್ರದೇಶದಲ್ಲಿ ಅನಧಿಕೃತವಾಗಿ ಗಾಂಜಾ ಬೆಳೆಯಲಾಗುತ್ತದೆ. ಚಿತ್ತೂರು ಜಿಲ್ಲೆಯ ವಿ.ಕೋಟಾ ತಾಲೂಕಿನ ಎರ್ನಾಗಪಲ್ಲಿ ಎಂಬ ಗ್ರಾಮದ ನಾಗರಾಜ್‌ ಎಂಬಾತ ಗಾಂಜಾ ಬೆಳೆಗಾರರನ್ನು ಸಂಪರ್ಕಿಸುತ್ತಿದ್ದ. ಬಳಿಕ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಸಂಗ್ರಹಿಸುತ್ತಿದ್ದ. ನಾಗರಾಜ್‌ನಿಂದ ಷಹಬಾಜ್‌ ಎಂಬಾತ ಹೋಲ್‌ಸೇಲ್‌ ದರದಲ್ಲಿ ಗಾಂಜಾ ಕೊಂಡು ಲೇಸ್‌ ಮತ್ತು ಕುರ್ಕುರೆ ಪ್ಯಾಕೆಟ್‌ನಲ್ಲಿ ತುಂಬಿ ರಾಜ್ಯದ ಸಯ್ಯದ್‌ಗೆ ಮಾರಾಟ ಮಾಡುತ್ತಿದ್ದ. ಸಯ್ಯದ್‌ನಿಂದ ಸಾದಿಕ್‌ ಶರೀಫ್‌ಗೆ ಪೂರೈಕೆಯಾಗಿ ಆತ ನಗರದಲ್ಲಿದ್ದ ಎಂಟು ಮಂದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ಡಿಸಿಪಿ ಅಬ್ದುಲ್‌ ಹೇಳಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸರು ನಾಗರಾಜ್‌ ಮತ್ತು ಷಹಬಾಜ್‌ನನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ದೊಡ್ಡ ಜಾಲವಿದು

ಬಂಧಿತ ಎಂಟು ಮಂದಿ ಗಾಂಜಾ ವ್ಯಾಪಾರಿಗಳು ತಲಾ ಸುಮಾರು 60ರಿಂದ 70 ಮಂದಿ ಪೆಡ್ಲ​ರ್‍ಸ್ಗಳನ್ನು ಹೊಂದಿದ್ದಾರೆ. ಬೆಂಗಳೂರಿನ ಅರ್ಧದಷ್ಟುಭಾಗಕ್ಕೆ ಇವರು ಕಳೆದ ನಾಲ್ಕು ವರ್ಷಗಳಿಂದ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಈ ಜಾಲ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಫ್ಟ್‌ವೇರ್‌ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿತ್ತು. ಬಂಧಿತರಿಂದ ಹಲವು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಂಧೆಕೋರರು ಮೂರ್ನಾಲ್ಕು ವರ್ಷದಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವ್ಯಸನಿಗಳನ್ನು ಪತ್ತೆ ಹಚ್ಚಿ ಅವರಲ್ಲಿ ಜಾಗೃತಿ ಮೂಡಿಸಲಾಗುವುದು.

- ಅಬ್ದುಲ್‌ ಅಹದ್‌, ಡಿಸಿಪಿ-ವೈಟ್‌ಫೀಲ್ಡ್‌ ವಿಭಾಗ

Follow Us:
Download App:
  • android
  • ios