ಬೆಂಗಳೂರು (ಮೇ. 30):  ಈಗಾಗಲೇ ರಾಜಧಾನಿ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗಿದೆ. ಈ ಬಾರಿ ಜೂನ್‌ನಲ್ಲಿ ಮುಂಗಾರು ಮಳೆ ದುರ್ಬಲಗೊಂಡರೆ ಮುಂದಿನ ದಿನಗಳಲ್ಲಿ ಈ ನೀರಿನ ಸಮಸ್ಯೆ ಮತ್ತಷ್ಟುಉಲ್ಬಣಗೊಳ್ಳುವುದು ಸಾಧ್ಯತೆಗಳು ಹೆಚ್ಚಿವೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜೂನ್‌ನಲ್ಲಿ ಕೆಎಆರ್‌ಎಸ್‌ನಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಈ ಪ್ರಕಾರ ನೀರು ಬಿಡುಗಡೆ ಮಾಡಿದರೆ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.

ಆದರೆ, ಪ್ರಾಧಿಕಾರವು ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರೆ ಮಾತ್ರ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದರಿಂದ ಸದ್ಯಕ್ಕೆ ಆ ಆತಂಕವಿಲ್ಲ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಪ್ರಸ್ತುತ ಕೆಆರ್‌ಎಸ್‌ ಜಲಾಶಯದಲ್ಲಿ 11 ಟಿಎಂಸಿ ನೀರು ಲಭ್ಯವಿದ್ದು, ಈ ಪೈಕಿ 7 ಟಿಎಂಸಿ ಮಾತ್ರ ಕುಡಿಯಲು ಬಳಕೆ ಮಾಡಬಹುದು. ರಾಜ್ಯ ಸರ್ಕಾರವು ಬೆಂಗಳೂರು ನಗರಕ್ಕೆ ಕುಡಿಯಲು ವಾರ್ಷಿಕ 19 ಟಿಎಂಸಿ ನೀರು ನಿಗದಿಗೊಳಿಸಿದೆ. ಈ ಪ್ರಕಾರ ಪ್ರತಿ ತಿಂಗಳು 1.5 ಟಿಎಂಸಿ ನೀರು ಸಿಗುತ್ತಿದೆ.

ಪ್ರಸ್ತುತ ಜಲಾಶಯದಲ್ಲಿ 11 ಟಿಎಂಸಿ ನೀರು ಇದ್ದರೂ 4 ಟಿಎಂಸಿ ಡೆಡ್‌ ಸ್ಟೋರೇಜ್‌ ಕಳೆದು ಬಳಕೆಗೆ 7 ಟಿಎಂಸಿ ಮಾತ್ರ ಲಭ್ಯವಾಗುತ್ತದೆ. ಈ ನೀರನ್ನು ಮುಂದಿನ ನಾಲ್ಕು ತಿಂಗಳು ಬೆಂಗಳೂರು ನಗರಕ್ಕೆ ಪೂರೈಕೆ ಮಾಡಬಹುದು.

ಒಂದು ವೇಳೆ ಜೂನ್‌ನಲ್ಲಿ ಉತ್ತಮ ಮುಂಗಾರು ಮಳೆಯಾಗಿ ಒಳಹರಿವು ಹೆಚ್ಚಾದರೆ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಮುಂಗಾರು ದುರ್ಬಲವಾದರೆ ನೀರಿನ ಸಮಸ್ಯೆ ಉಂಟಾಗುವುದು ಖಚಿತ. ಹಾಗಾಗಿ ಬೆಂಗಳೂರು ಕುಡಿಯುವ ನೀರು ಪೂರೈಕೆ ಮುಂಗಾರು ಮಳೆಯನ್ನೇ ಅವಲಂಭಿಸಿದೆ.

ಕಳೆದ ಫೆಬ್ರವರಿಯಲ್ಲಿ ಜಲಮಂಡಳಿಯು ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದು, ಏಪ್ರಿಲ್‌ನಿಂದ ಜುಲೈವರೆಗೆ 7 ಟಿಎಂಸಿ ನೀರನ್ನು ಬೆಂಗಳೂರಿಗೆ ಮೀಸಲಿರಿಸುವಂತೆ ಕೋರಿದೆ. ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರೆ ಜೂನ್‌ನಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಜಲಾಶಯಕ್ಕೆ ಒಳಹರಿವು ಕಡಿಮೆಯಿರುವುದರಿಂದ ನೀರು ಬಿಡುಗಡೆ ಸಾಧ್ಯವಿಲ್ಲ. ಹಾಗಾಗಿ ಜನ ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ. ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಜಲಮಂಡಳಿ ಪ್ರಧಾನ ಮುಖ್ಯ ಇಂಜಿನಿಯರ್‌ ಕೆಂಪರಾಮಯ್ಯ ಹೇಳಿದರು.