ಅವರದ್ದು, 9 ವರ್ಷದ ಪೀತಿ. ನನಗಾಗಿ ನೀನು... ನೀನಗಾಗಿ ನಾನು ಅಂತ ಕೈಕೈ ಹಿಡಿದು ಬೆಂಗಳೂರಲ್ಲಿ ತಿರುಗಾಡಿದ ಜಾಗವಿಲ್ಲ. ಒಂದು ಹಂತದಲ್ಲಿ ಹುಡುಗನ ಪೋಷಕರು ಮದುವೆಗೆ ಒಪ್ಪಿದರೂ, ಮತಾಂತರ ಒಪ್ಪಲೇ ಇಲ್ಲ.  ನಿರಾಸೆಗೊಂಡ ಭಗ್ನ ಪ್ರೇಯಸಿ ಕೈಗೆ ಆಸಿಡ್​​ ಬಾಟಲಿ ಬಂದಿತ್ತು.

ಬೆಂಗಳೂರು(ಜ. 17): ಶ್ರೀರಾಮಪುರ ನಿವಾಸಿ ಜಯಕುಮಾರ್ ಮೇಲೆ ಯುವತಿ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮತಾಂತರಕ್ಕೆ ಒಪ್ಪದಿದ್ದರಿಂದ ಯುವತಿ ಲಿಡಿಯಾ ಈ ಅತಿರೇಕ ಹಂತಕ್ಕೆ ಹೋದಳೆಂಬ ವಿಷಯ ಬೆಳಕಿಗೆ ಬಂದಿದೆ. ಶ್ರೀರಾಮಪುರಂ ನಿವಾಸಿಗಳಾದ ಇವರಿಬ್ಬರು 9 ವರ್ಷಗಳಿಂದ ಲವರ್'ಗಳಾಗಿದ್ದು, 6 ತಿಂಗಳ ಹಿಂದೆ ಬ್ರೇಕಪ್ ಆಗಿದ್ದರೆನ್ನಲಾಗಿದೆ.

ಜಯಕುಮಾರ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು 2016ರ ಜೂನ್'ನಲ್ಲೇ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಲಿಡಿಯಾ ದೂರು ನೀಡಿರುತ್ತಾಳೆ. ಈ ವೇಳೆ ಜಾತಿ ವಿಚಾರವಾಗಿ ಜಯಕುಮಾರ್ ಮನೆಯವರು ಕ್ಯಾತೆ ತೆಗೆದಿದ್ದಾರೆ ಎಂದು ದೂರಿನಲ್ಲಿ ಆಕೆ ಆರೋಪಿಸಿರುತ್ತಾಳೆ. ಆಗ ಪೊಲೀಸರು ಇವರಿಬ್ಬರನ್ನೂ ಕರೆಸಿ ಬುದ್ಧಿ ಹೇಳಿ ಕಳುಹಿಸಿರುತ್ತಾರೆ.

ಜಯಕುಮಾರ್'ನ ಸಂಬಂಧಿಕರು ಹೇಳುವ ಪ್ರಕಾರ, ಅವರಿಬ್ಬರ ನಡುವೆ ಯಾವುದೇ ಪ್ರೀತಿ-ಪ್ರೇಮ ಇರಲಿಲ್ಲ. ಕಾಮನ್ ಫ್ರೆಂಡ್ಸ್ ಮೂಲಕ ವಾಟ್ಸಾಪ್ ಮತ್ತು ಫೇಸ್ಬುಕ್'ನಲ್ಲಿ ಇಬ್ಬರು ಪರಿಚಿತರಾಗಿದ್ದರಷ್ಟೇ. ವಾಟ್ಸಾಪ್ ಮೆಸೇಜ್'ನಲ್ಲೆಲ್ಲೂ ಆತ ಆಕೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕಂಡುಬಂದಿಲ್ಲ. ಇವರಿಬ್ಬರ ಮಧ್ಯೆ ಲವ್ ಇದೆ ಎಂದು ಲಿಡಿಯಾ ತಾಯಿ ಅಪಾರ್ಥ ಮಾಡಿಕೊಂಡಿದ್ದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಜಯಕುಮಾರ್ ಮೇಲೆ ಆಗಿಂದಾಗ್ಗೆ ಒತ್ತಡ ಹಾಕುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಜಯಕುಮಾರ್'ಗೆ ಲಿಡಿಯಾ ಜೀವಬೆದರಿಕೆಯನ್ನೂ ಹಾಕಿದ್ದಳೆಂದು ಜಯಕುಮಾರ್ ಕುಟುಂಬಸ್ಥರು ಹೇಳುತ್ತಾರೆ.

ಏನಿದು ಘಟನೆ?
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಜಯಕುಮಾರ್ ತನ್ನ ಗೆಳೆಯನ ಜೊತೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗಿ ಕಾರಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಆಗ, ಬುರ್ಖಾ ತೊಟ್ಟು ಆ್ಯಕ್ಟಿವ್ ಹೊಂಡಾದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಲಿಡಿಯಾ ಕೈಯಲ್ಲಿ ಆ್ಯಸಿಡ್ ಹಿಡಿದು ಜಯಕುಮಾರ್ ಮೇಲೆ ಎರಚುತ್ತಾಳೆ. ನಂತರ, ಸರ್ಜಿಕಲ್ ಬ್ಲೇಡ್ ಮತ್ತು ಚಾಕುವಿನಿಂದ ಜಯಕುಮಾರ್ ಮೇಲೆ ಹಲ್ಲೆ ಮಾಡುತ್ತಾಳೆ. ಅಷ್ಟರಲ್ಲಿ ಸ್ಥಳಕ್ಕೆ ಜಮಾಯಿಸುವ ಸಾರ್ವಜನಿಕರು ಈಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.

ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುವ ಲಿಡಿಯಾ ಪಕ್ಕಾ ಪ್ಲಾನ್ ಮಾಡಿಕೊಂಡು ಈ ಕೃತ್ಯ ಎಸಗಿರುತ್ತಾಳೆ. ತನ್ನ ಗುರುತು ಸಿಗಬಾರದೆಂದು ಬುರ್ಖಾ ತೊಟ್ಟಿದ್ದಲ್ಲದೇ, ಆ್ಯಕ್ಟಿವ್ ಹೊಂಡಾಗೆ ಸುಳ್ಳು ನಂಬರ್ ಪ್ಲೇಟ್ ಹಾಕಿರುತ್ತಾಳೆ.

ಸದ್ಯ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇದೇ ವೇಳೆ ಆ್ಯಸಿಡ್​ ದಾಳಿಗೆ ಒಳಗಾಗಿರುವ ಜಯಕುಮಾರ್​​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏನೇ ಇದ್ರೂ, ಹುಡುಗಿಯೊಬ್ಬಳು ಸಾರ್ವಜನಿಕ ಪ್ರದೇಶದಲ್ಲೇ ಹುಡುಗನಿಗೆ ಆ್ಯಸಿಡ್​​ ಎರಚಿ ಆಕೆಯೂ ಜೈಲಿಗೆ ಹೋಗಿ, ಪ್ರಿಯಕರನ ಬಾಳಿಗೂ ಬೆಂಕಿ ಇಟ್ಟದ್ದು ದುರಂತ.

- ಚೇತನ್​ ಎಂ, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್​