ಹುಬ್ಬಳ್ಳಿ[ಏ.12]: ಗೋವಾ ಜತೆಗಿನ ಮಹದಾಯಿ ನದಿ ವಿವಾದವು ಈಡೇರಿಸಲಾಗದ ಸಮಸ್ಯೆ ಏನಲ್ಲ. ಕೇಂದ್ರದ ಮೇಲೆ ಒತ್ತಡ ತರುವ ಇಚ್ಛಾಶಕ್ತಿ, ಬೇಡಿಕೆ ಈಡೇರರಿದ್ದರೆ ರಾಜೀನಾಮೆ ನೀಡುವಷ್ಟುಬದ್ಧತೆ ನಮ್ಮ ಜನಪ್ರತಿನಿಧಿಗಳಲ್ಲಿ ಬಂದರೆ ಎಂತಹ ಸಮಸ್ಯೆ ಬೇಕಾದರೂ ಬಗೆಹರಿಸಬಹುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದಲ್ಲಿ ಆಯ್ಕೆಯಾಗುವ ಸಂಸದರು, ಇಲ್ಲಿನ ಜನರಿಗಾಗಿ ಕೇಂದ್ರದ ಮಟ್ಟದಲ್ಲಿ ಎಂಥ ಹೋರಾಟಕ್ಕೂ ಸಿದ್ಧರಾಗಿಬೇಕು. ಒತ್ತಡ ಹೇರುವ, ಸಾಮೂಹಿಕ ರಾಜೀನಾಮೆ ನೀಡುವಷ್ಟುಬದ್ಧತೆ ಇರಬೇಕು. ಆಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ. ಯುಪಿಪಿ ಅಧಿಕಾರಕ್ಕೆ ಬಂದಲ್ಲಿ ಇಂಥ ಇಚ್ಛಾಶಕ್ತಿ ಪ್ರದರ್ಶಿಸಲಿದೆ ಎಂದರು.

ಇದೇವೇಳೆ ಪ್ರಜಾಕೀಯ ಯಾವ ರಾಜಕೀಯ ಪಕ್ಷದ ಜತೆಗೂ ಸೇರುವುದಿಲ್ಲ. ಆದರೆ, ನಮ್ಮ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಅಧಿಕಾರನ್ನು ಅನುಭವಿಸುವ ಅವರು, ನಮ್ಮ ಜನರ ಬೇಡಿಕೆ ಈಡೇರುವಂತೆ ಒತ್ತಡ ತರುವ ಕಾರ್ಯ ನಮ್ಮಿಂದ ಆಗಲಿದೆ ಎಂದರು.

ಪ್ರಣಾಳಿಕೆ ಇಲ್ಲ:

ಚುನಾವಣೆಯ ಈ ವೇಳೆ ಯುಪಿಪಿ ಯಾವುದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಿಲ್ಲ. ಜನತೆಗೆ ಹತ್ತಿರವಾಗಿ ಅವರಲ್ಲಿ ಬೆರೆತು ಸಮಸ್ಯೆ ಅರಿತು ಬಳಿಕ ಅದನ್ನು ಬಗೆಹರಿಸುವುದು ನಮ್ಮ ಧ್ಯೇಯವಾಗಿದೆ. ಇದಕ್ಕಾಗಿ ನಾವು ಜನತೆಗೆ ನಿಮ್ಮದೆ ಪ್ರಣಾಳಿಕೆ ಎಂದೇ ನಮೂದಿಸಿ ನೀಡುತ್ತಿದ್ದೇವೆ. ಅವರಿಂದ ಪ್ರತಿಕ್ರಿಯೆ ಪಡೆದು ಏನು ಬದಲಾವಣೆ ಆಗಬೇಕೋ ಅದನ್ನು ನಿರ್ವಹಿಸುತ್ತೇವೆ ಎಂದರು.

ವಿದೇಶಗಳಲ್ಲಿ ಕಾರ್ಪೋರೇಟರ್‌ ಕೂಡ ತನ್ನಿಂದಾದ ಕಾರ್ಯಗಳ ಬಗ್ಗೆ ತನ್ನ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡುತ್ತ, ಇದರ ಅನಿಸಿಕೆಯನ್ನು ತಿಳಿಯಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಾನೆ. ಜನತೆಯಿಂದ ಪ್ರತಿಕ್ರಿಯೆ ಪಡೆಯುತ್ತಾನೆ. ಆದರೆ, ನಮ್ಮಲ್ಲಿ ಬೇಡಿಕೆಯನ್ನು ಸ್ವೀಕರಿಸುವ, ಭರವಸೆ ನೀಡುವ ಸಂಪ್ರದಾಯ ಮಾತ್ರವಿದ್ದು, ಅದನ್ನು ಈಡೇರಿಸುವ ಪರಿಪಾಠ ಇಲ್ಲ ಎಂದರು.

ಇದು ಕೇವಲ ಪಿಎಂ ಆಯ್ಕೆ ಮಾಡುವ ಚುನಾವಣೆ ಅಲ್ಲ, ಎಂಪಿ ಆಯ್ಕೆ ಮಾಡುವ ಪ್ರಕ್ರಿಯೆ ಎಂದು ಜನತೆ ಅರಿಯಬೇಕು. ಇದು .3 ಲಕ್ಷ ಸಂಬಳ ಪಡೆದು ಜನರಿಗಾಗಿ ಕೆಲಸ ಮಾಡಿಕೊಡುವ ಒಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆಗಬೇಕು. ಆ ಕೆಲಸ ಮಾಡುವನು ಎಂಥ ವ್ಯಕ್ತಿತ್ವ ಹೊಂದಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಚುನಾವಣೆ ಸೋತ ಅಭ್ಯರ್ಥಿ ಪುನಃ ಪುನಃ ಎಲೆಕ್ಷನ್‌ಗೆ ನಿಲ್ಲುವ ವ್ಯವಸ್ಥೆಯೂ ಯುಪಿಪಿಯಲ್ಲಿ ಇಲ್ಲ. ಜನ ತಮಗಾಗಿ ಮತ ಹಾಕಿಕೊಳ್ಳಬೇಕು, ತಮಗಾಗಿ ಕೆಲಸ ಮಾಡಿಕೊಳ್ಳುವವರನ್ನು ನೇಮಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.