1. ಅರಮನೆ ಮೈದಾನ ಬಳಕೆ ವಿಚಾರದಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ಕಾರ್ಯಕ್ರಮಕ್ಕೆ 3 ದಿನಕ್ಕಿಂತ ಹೆಚ್ಚು ಮೈದಾನವನ್ನು ಬಾಡಿಗೆಗೆ ನೀಡುವಂತಿಲ್ಲ. ಆದರೆ, ರೆಡ್ಡಿ ಪುತ್ರಿ ವಿವಾಹಕ್ಕೆ ಕನಿಷ್ಟಎರಡು ತಿಂಗಳಿಗೂ ಹೆಚ್ಚು ಕಾಲ ಆವರಣವನ್ನು ನೀಡಲಾಗಿದೆ. ಅರಮನೆ ಆವರಣದ 32 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮದುವೆ ಸಮಾರಂಭದ ಸೆಟ್‌ಗಳನ್ನು ಹಾಕಲಾಗಿದ್ದು ಈ ಸ್ಥಳ ರಾಜವಂಶಸ್ಥರ 6 ಕುಟುಂಬಗಳಿಗೆ ಸೇರಿದ್ದು ಎಲ್ಲರೂ ನಿಯಮಬಾಹಿರವಾಗಿ ಮೈದಾನವನ್ನು ಬಾಡಿಗೆಗೆ ನೀಡಿರುವುದು ಸ್ಪಷ್ಟವಾಗುತ್ತಿದೆ.2. ಸಮಾರಂಭಕ್ಕೆ ಬಳಕೆ ಮಾಡಿದ್ದ ಎಲ್ಲಾ ತಾತ್ಕಾಲಿಕ ನಿರ್ಮಾಣಗಳನ್ನೂ ಸಮಾರಂಭ ಮುಗಿದ ಕೂಡಲೇ ತೆಗೆದು ಹಾಕಬೇಕೆಂಬುದು ನಿಯಮ. ಆದರೆ ಈ ನಿಯಮಾವಳಿಯೂ ಇದೀಗ ಉಲ್ಲಂಘನೆಯಾಗಿದೆ. ರೆಡ್ಡಿ ಪುತ್ರಿ ವಿವಾಹಕ್ಕೆ ನಿರ್ಮಾಣ ಮಾಡಿರುವ ತಿರುಪತಿ ಮಾದರಿ ದೇವಾಲಯ, ಹಂಪಿಯ ವಿಜಯ ವಿಠಲ ದೇವಾಲಯ, ವಧು ವರರಿಗೆ ಅತಿಥಿಗಳಿಗೆಂದು ನಿರ್ಮಾಣ ಮಾಡಿದ್ದ ಮನೆಗಳು ಇವೆಲ್ಲವನ್ನು ತೆರವುಗೊಳಿಸಲು ಕನಿಷ್ಟವೆಂದರೂ ವಾರದ ಅಗತ್ಯವಿದೆ ಎಂದು ತೆರವು ಕಾರ್ಯದಲ್ಲಿ ನಿರತರಾಗಿದ್ದವರೇ ಹೇಳುತ್ತಿದ್ದಾರೆ.

ಬೆಂಗಳೂರು (ನ.18): ಆಡಂಬರ ಮೆರೆದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ವಿವಾಹದ ಬಳಿಕ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಲು ಬಿಬಿಎಂಪಿಯ ತ್ಯಾಜ್ಯ ಸಾಗಣೆ ವಾಹನಗಳು ಬಳಕೆಯಾಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಅರಮನೆ ಮೈದಾನದಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಸೃಷ್ಟಿಯಾಗುವ ಕಸ ವಿಲೇವಾರಿಗೆ ಬಿಬಿಎಂಪಿಯ ವಾಹನಗಳ ಬಳಕೆಗೆ ಅವಕಾಶವಿಲ್ಲ​ದಿದ್ದರೂ ರೆಡ್ಡಿ ಪುತ್ರಿ ವಿವಾಹದಿಂದ ಉಂಟಾಗಿದ್ದ ತ್ಯಾಜ್ಯಕ್ಕೆ ಮಾತ್ರ ಇದು ಅನ್ವಯವಾಗಲಿಲ್ಲ. ಈ ಕುರಿತು ‘ಕನ್ನಡಪ್ರಭ' ಪ್ರಶ್ನಿಸಿದಾಗ, ‘‘ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು,'' ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಅರಮನೆ ಮೈದಾನ, ಕಲ್ಯಾಣ ಮಂಟಪ ಸೇರಿದಂತೆ ಭಾರಿ ಕಸ ಉತ್ಪಾದಕ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಬಂಧಪಟ್ಟವರೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಈ ಘಟಕಗಳ ತ್ಯಾಜ್ಯ ಸಾಗಣೆಗೆ ಬಿಬಿಎಂಪಿ ವಾಹನಗಳನ್ನು ಬಳಸುವಂತಿಲ್ಲ. ಆದರೆ ಈ ನಿಯಮ ಗಾಳಿಗೆ ತೂರಿ ಬಿಬಿಎಂಪಿ ವಾಹನಗಳು ಅರಮನೆ ಮೈದಾನದಲ್ಲಿ ರೆಡ್ಡಿ ಪುತ್ರಿ ವಿವಾಹದ ಕಸ, ತ್ಯಾಜ್ಯ ತುಂಬಿಸಿದವು. ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್‌ ಖಾಸಗಿ ಏಜೆನ್ಸಿಗಳು ಹಣ ಮಾಡುವ ಸಲುವಾಗಿ ನಿಯಮಬಹಿರವಾಗಿ ಮದುವೆ ಕಸ ಸಂಗ್ರಹಿಸಿರಬಹುದು ಎಂದರು.

ನಿಧಾನವಾಗಿ ತೆರವು: ಜನಾರ್ದನ ರೆಡ್ಡಿ ಪುತ್ರಿಯ ಮದುವೆ ಸಮಾರಂಭ ಮುಗಿದ ಬೆನ್ನಲ್ಲೇ ಅರಮನೆ ಮೈದಾನದಲ್ಲಿ ನಿರ್ಮಾಣಗೊಂಡ ಸೆಟ್‌ಗಳ ತೆರವು​ಗೊಳಿಸುವ ಕಾರ್ಯ ಶುರುವಾಗಿದ್ದು, ಸಂಪೂರ್ಣ​ವಾಗಿ ತೆರವುಗೊಳಿಸಲು ಕನಿಷ್ಠ ಒಂದು ವಾರ ಬೇಕಾಗ​ಬ​ಹುದು ಎಂದು ಮೇಲ್ವಿಚಾರಕರು ಹೇಳಿದ್ದಾರೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ (ಪಿಒಪಿ) ನಿರ್ಮಾಣ ವಾಗಿದ್ದ ಪ್ರತಿಕೃತಿಗಳನ್ನು ಸಾಮಾನ್ಯ ವೇದಿಕೆಗಳಂತೆ ತೆರವುಗೊಳಿಸಲು ಸಾಧ್ಯವಿಲ್ಲ. ಎಲ್ಲವನ್ನು ಕತ್ತರಿಸಿಯೇ ಸ್ವಚ್ಛ ಮಾಡಬೇಕು. ಹಾಗಾಗಿ ಹೆಚ್ಚು ಸಮಯ ಹಿಡಿಯುತ್ತದೆ. ಇಲ್ಲಿನ ನೂರಾರು ಸಿಬ್ಬಂದಿ ಹಗಲಿರುಳು ಕೆಲಸ ಮಾಡಿದರು ಎಲ್ಲ ಅಲಂಕಾರಿಕ ಸೆಟ್‌ಗಳ ತೆರವಿಗೆ ಕನಿಷ್ಠ 5 ದಿನ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅರಮನೆಯ ಪ್ರವೇಶದ ದ್ವಾರದಲ್ಲಿ ಗಣ್ಯರನ್ನು ಆಹ್ವಾನಿಸಲು ಸಿದ್ಧಪಡಿಸಲಾಗಿದ್ದ ಸ್ವಾಗತ ಮಂಟಪ, ಕಮಾನುಗಳು, ಪ್ರವೇಶ ದ್ವಾರದ ಎಡ ಭಾಗದಲ್ಲಿ ನಿರ್ಮಿಸಿರುವ ಸಣ್ಣ-ಸಣ್ಣ ಶೆಡ್‌ಗಳೂ ತೆರವಾಗಿಲ್ಲ. ಈ ಬಗ್ಗೆ ಸಂಪರ್ಕಿಸಿದಾಗ ಅರಮನೆ ಉಸ್ತುವಾರಿ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು.

ಹಸಿ-ಒಣ ಕಸ ಒಂದೆ!: ಬಿಎಂಎಂಪಿ ಆದೇಶದ ಪ್ರಕಾರ ಹಸಿ-ಒಣ ಕಸವನ್ನು ಪ್ರತ್ಯೇಕವಾಗಿ ಸಾಗಿಸಿ ಸಂಸ್ಕರಿಸಬೇಕು. ಆದರೆ, ಇಲ್ಲಿ ಎಲ್ಲವನ್ನು ಒಟ್ಟಿಗೆ ಹಾಕಲಾಗಿದೆ. ಹಾಗಾಗಿ ಕಸ ವಿಂಗಡಣೆ ಹಾಗೂ ಪ್ರತ್ಯೇಕ ಸಾಗಣೆ ನಿಯಮ ಕೂಡ ಪಾಲನೆಯಾಗದಂತಾಗಿದೆ.