ಬೆಂಗಳೂರು :  ಆಸ್ತಿ ತೆರಿಗೆ ಪಾವತಿಗೆ ಶೇ.5 ರಿಯಾಯಿತಿಗೆ ನೀಡಿದ ಅವಧಿ ಮಂಗಳವಾರಕ್ಕೆ ಕೊನೆಯಾದ ಹಿನ್ನೆಲೆಯಲ್ಲಿ ಸುಮಾರು 124 ಕೋಟಿ ಪಾವತಿಯಾಗುವ ಮೂಲಕ ಆರ್ಥಿಕ ವರ್ಷದ ಮೊದಲ ತಿಂಗಳಾಂತ್ಯಕ್ಕೆ 880 ಕೋಟಿ ಆಸ್ತಿ ತೆರಿಗೆ ಬಿಬಿಎಂಪಿಗೆ ಸಂಗ್ರಹವಾಗಿದೆ.

ಏ.29ರ ಸೋಮವಾರ 756 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆ ಆಗಿತ್ತು. ಮಂಗಳವಾರ 124 ಕೋಟಿ ಪಾವತಿ ಮೂಲಕ 880 ಕೋಟಿಗೆ ಏರಿಯಾಗಿದೆ. 6 ಲಕ್ಷಕ್ಕೂ ಅಧಿಕ ಆಸ್ತಿಗಳ ಮಾಲೀಕರು ಏಪ್ರಿಲ್‌ ತಿಂಗಳಲ್ಲಿ ನೀಡಲಾಗಿದ್ದ ಶೇ.5 ರಿಯಾಯಿತಿ ಪಡೆದುಕೊಂಡಿದ್ದಾರೆ.

ಇನ್ನು ಕಳೆದ 2018ರ ಏಪ್ರಿಲ್‌ ಅಂತ್ಯಕ್ಕೆ 721 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಿತ್ತು. ಪ್ರಸಕ್ತ ವರ್ಷ880 ಕೋಟಿ ವಸೂಲಿ ಆಗುವ ಮೂಲಕ ಆಸ್ತಿ ತೆರಿಗೆ ಸಂಗ್ರಹಣೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

 ಸಾವಿರ ಕೋಟಿ ಪಾವತಿ:

ಈವರೆಗೆ ಪಾವತಿಸಲಾದ ತೆರಿಗೆಯಲ್ಲಿ ಈಗಾಗಲೆ 880 ಕೋಟಿ ವಿವಿಧ ಬ್ಯಾಂಕ್‌ಗಳಿಂದ ಬಿಬಿಎಂಪಿಗೆ ವರ್ಗಾವಣೆ ಆಗಿದೆ. ಅದರ ಜತೆಗೆ 18,238 ಆಸ್ತಿಗಳ ಮಾಲೀಕರು ಪಾವತಿಸಿರುವ 197 ಕೋಟಿ ತೆರಿಗೆ ಮೊತ್ತವನ್ನು ಬ್ಯಾಂಕ್‌ಗಳಿಂದ ಇನ್ನೂ ಬಿಡುಗಡೆ ಮಾಡಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಅಂತಿಮ ರಶೀದಿ ಇನ್ನೂ ಬಿಡುಗಡೆಯಾಗದ ಕಾರಣ, ಅದನ್ನು ಬಿಬಿಎಂಪಿಗೆ ವರ್ಗಾಯಿಸಿಲ್ಲ. ಹೀಗಾಗಿ ಅದನ್ನೂ ಸೇರಿಸಿದರೆ ಬಿಬಿಎಂಪಿ ಒಂದು ತಿಂಗಳಲ್ಲಿ ಒಟ್ಟು 1,077 ಕೋಟಿ ತೆರಿಗೆ ಪಾವತಿಯಾದಂತಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.(ಏ.30ರ ಸಂಜೆ 7 ಗಂಟೆಗೆ ಸಿಕ್ಕ ಮಾಹಿತಿ)

ರಿಯಾಯಿತಿ ಅವಧಿ ವಿಸ್ತರಣೆ ಇಲ್ಲ:

ಕೆಎಂಸಿ ಕಾಯ್ದೆ ಪ್ರಕಾರ ಆರ್ಥಿಕ ವರ್ಷ ಆರಂಭವಾದ ಮೊದಲ ತಿಂಗಳು ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ತೆರಿಗೆ ಮೊತ್ತದಲ್ಲಿ ಶೇ.5 ರಿಯಾಯಿತಿ ನೀಡಲಾಗುತ್ತದೆ. ಆ ಅವಧಿ ಏಪ್ರಿಲ್‌ಗೆ ಪೂರ್ಣಗೊಂಡಿದೆ. ಇನ್ನು, ಆಸ್ತಿ ಮಾಲೀಕರಿಂದ ಬೇಡಿಕೆ ಹೆಚ್ಚಾದರೆ ಆ ಅವಧಿಯ್ನನು ಮೇ ತಿಂಗಳಿಗೂ ವಿಸ್ತರಿಸಲಾಗುತ್ತದೆ. ಆದರೆ, ಈವರ್ಷ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮೇ 1ರಿಂದ ಪಾವತಿಸುವ ತೆರಿಗೆಗೆ ರಿಯಾಯಿತಿ ನೀಡುತ್ತಿಲ್ಲ. ಕಳೆದ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿ ವಿಸ್ತರಣೆ ಮಾಡಿರಲಿಲ್ಲ.

4 ಸಾವಿರ ಕೋಟಿ ಸಂಗ್ರಹ ಗುರಿ

ಕಳೆದ ಫೆಬ್ರವರಿಯಲ್ಲಿ ಮಂಡಿಸಲಾದ ಬಿಬಿಎಂಪಿ ಬಜೆಟ್‌ ವೇಳೆ 2019-20 ಸಾಲಿನ ಅವಧಿಯಲ್ಲಿ 4,100 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆ ಗುರಿಯೊಂದಿಗೆ 12,574 ಕೋಟಿ ಆಯವ್ಯಯ ಮಂಡಿಸಿತ್ತು. ಇನ್ನು ಕಳೆದ 2018-19 ಸಾಲಿನಲ್ಲಿ 3,100 ಕೋಟಿ ಸಂಗ್ರಹ ಗುರಿ ಹಾಕಿಕೊಂಡಿದ್ದ ಬಿಬಿಎಂಪಿ 2,550 ಕೋಟಿ ಮಾತ್ರ ವಸೂಲಿ ಮಾಡಿತ್ತು. ಇದೀಗ 30 ದಿನದಲ್ಲಿ 1 ಸಾವಿರ ಕೋಟಿ ರು ಸಂಗ್ರಹಿಸಿರುವ ಬಿಬಿಎಂಪಿ ಉಳಿದ 11 ತಿಂಗಳಲ್ಲಿ ಹಾಕಿಕೊಂಡ ಗುರಿ ಮುಟ್ಟಲಿದೆಯಾ ಎಂಬುದನ್ನು ಕಾದು ನೋಡಬೇಕು. ಕೆಎಂಸಿ ಕಾಯ್ದೆ ಪ್ರಕಾರ ಆರ್ಥಿಕ ವರ್ಷದ ಮೊದಲ ತಿಂಗಳು ಆಸ್ತಿ ತೆರಿಗೆ ಪಾವತಿ ದಾರರಿಗೆ ಶೇ.5 ರಷ್ಟುರಿಯಾಯಿತಿ ನೀಡಲಾಗಿದೆ. ರಿಯಾಯಿತಿ ಅವಧಿ ವಿಸ್ತರಣೆ ಮಾಡಲು ಅವಕಾಶವಿಲ್ಲ.

-ಮಂಜುನಾಥ್‌ ಪ್ರಸಾದ್‌, ಆಯುಕ್ತರು.