ಬಿಬಿಎಂಪಿ ಬಜೆಟ್ ಬಗ್ಗೆ ಆಯುಕ್ತರಿಂದಲೇ ಅಸಮಾಧಾನ| ಬಜೆಟ್ ಗಾತ್ರ ಇಳಿಸಲು ಸರ್ಕಾರಕ್ಕೆ 6 ಪುಟಗಳ ಪತ್ರ| ಶೇ.173.61ರಷ್ಟುಹೆಚ್ಚು ಗಾತ್ರದ ಅವಾಸ್ತವಿಕ ಬಜೆಟ್| 12,958 ಕೋಟಿ ಬಜೆಟ್‌ಗೆ ಅನುಮೋದನೆ ನೀಡಬೇಡಿ, 9 ಸಾವಿರ ಕೋಟಿಗಿಳಿಸಿ| ಬಜೆಟ್ ಗಾತ್ರಕ್ಕೂ, ಆದಾಯಕ್ಕೂ ಅಜಗಜಾಂತರ ವ್ಯತ್ಯಾಸ| ಹೀಗಾಗಿ ಅನುಷ್ಠಾನ ಅಸಾಧ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ಮುಜುಗರ
ಬೆಂಗಳೂರು[ಮಾ.03]: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಂಡಿಸಿರುವ .12,958 ಕೋಟಿ ಮೊತ್ತದ ಬೃಹತ್ ಬಜೆಟ್ ಅವಾಸ್ತವಿಕವಾಗಿದ್ದು, ಅನುಷ್ಠಾನ ಮಾಡಲು ಅಸಾಧ್ಯ. ಸ್ವಂತ ಆದಾಯವಿಲ್ಲದಿದ್ದರೂ ಅನಗತ್ಯವಾಗಿ ಬಜೆಟ್ ಗಾತ್ರ ಹಿಗ್ಗಿಸಲಾಗಿದೆ. 2017-18ರ ವಾಸ್ತವ ಲೆಕ್ಕ ಪರಿಶೀಲಿಸಿದರೆ ಶೇಕಡ 173.61ರಷ್ಟುಹೆಚ್ಚು ಗಾತ್ರದ ಅವಾಸ್ತವಿಕ ಬಜೆಟ್ ಮಂಡಿಸಲಾಗಿದೆ. ಹೀಗಾಗಿ ಇದಕ್ಕೆ ಯತಾಸ್ಥಿತಿಯಲ್ಲಿ ಒಪ್ಪಿಗೆ ನೋಡಿದರೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ.
-ಹೀಗಂತ ಬಿಬಿಎಂಪಿ ವಿರೋಧ ಪಕ್ಷದವರು ಆರೋಪ ಮಾಡಿಲ್ಲ. ಬದಲಿಗೆ ಖುದ್ದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ!
ಹೌದು, ಬಿಬಿಎಂಪಿ ಬಜೆಟ್ ಪುಸ್ತಕ ಅವಾಸ್ತವಿಕ ಅಂದಾಜುಗಳ ‘ಆಶಾಗೋಪುರ’ ಎಂದು ಖುದ್ದು ಮಂಜುನಾಥಪ್ರಸಾದ್ ಅವರೇ ಪರೋಕ್ಷವಾಗಿ ಒಪ್ಪಿಕೊಂಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆರು ಪುಟಗಳ ಸವಿಸ್ತಾರವಾದ ಪತ್ರ ಬರೆದಿದ್ದಾರೆ.
ಈ ಮೂಲಕ ಅನುಷ್ಠಾನ ಯೋಗ್ಯವಲ್ಲದ ಆಶಾ ಗೋಪುರಗಳನ್ನು ಸೃಷ್ಟಿಸಿ ಬಜೆಟ್ ಪುಸ್ತಕದಲ್ಲಿ ಮುದ್ರಿಸಿದ್ದ ಹಾಗೂ ತಾವು ವಾಸ್ತವಿಕ ಬಜೆಟ್ ಮಂಡಿಸುತ್ತಿರುವುದಾಗಿ ತಮ್ಮ ಬೆನ್ನು ತಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಬಿಬಿಎಂಪಿ ಆಡಳಿತಕ್ಕೆ ತೀವ್ರ ಮುಖಭಂಗ ಉಂಟಾಗಿದೆ.
9 ಸಾವಿರ ಕೋಟಿ ಗಾತ್ರ ಸಾಕು:
ಮೈತ್ರಿ ಆಡಳಿತದ 4ನೇ ಆಯವ್ಯಯವನ್ನು ಫೆ.18ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. 10,688 ಕೋಟಿ ಮೊತ್ತದ ಬಜೆಟ್‌ನ್ನು ಬಜೆಟ್ ಚರ್ಚೆ ಬಳಿಕ 12,957 ಕೋಟಿಗೆ ಪರಿಷ್ಕರಿಸಿ ಅನುಮೋದನೆ ನೀಡಲಾಗಿದೆ. ಇಷ್ಟುಮೊತ್ತದ ಬಜೆಟ್ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಬಿಬಿಎಂಪಿ ಬಜೆಟ್‌ನ ಮೊತ್ತವನ್ನು 9 ಸಾವಿರ ಕೋಟಿಗೆ ಮಿತಿಗೊಳಿಸಿದರೆ ಮಾತ್ರ ಅನುಷ್ಠಾನಗೊಳಿಸಲು ಸಾಧ್ಯ. ಹೀಗಾಗಿ ಈ ಆಯವ್ಯಯವನ್ನು 9 ಸಾವಿರ ಕೋಟಿಗೆ ಮೊಟಕುಗೊಳಿಸಬೇಕು ಎಂದು ಸರ್ಕಾರದ ಮೊರೆ ಹೋಗಿದ್ದಾರೆ.
ಅವಾಸ್ತವಿಕ ಎನ್ನಲು ಇಲ್ಲಿದೆ ಕಾರಣ
2017-18ನೇ ಸಾಲಿನ ವಾಸ್ತವಿಕ ಲೆಕ್ಕಗಳಿಗೆ ಹೋಲಿಸಿದರೆ ಪ್ರಸಕ್ತ ಬಜೆಟ್‌ನ ಗಾತ್ರ ಶೇ.173.61ರಷ್ಟುಅಧಿಕವಾಗಿದೆ. 2018-19ನೇ ಸಾಲಿನ ಅಂದಾಜಿಸಿದ ಲೆಕ್ಕಗಳಿಗೆ ಹೋಲಿಸಿದರೆ ಶೇ.148.09ರಷ್ಟುಅಧಿಕವಾಗಿದೆ.
ಈ ಆಧಾರದ ಮೇಲೆ 2019-20ನೇ ಆದಾಯ ಹಾಗೂ ಸರ್ಕಾರದ ಅನುದಾನಗಳನ್ನು ಪರಿಗಣಿಸಿದರೆ 9 ಸಾವಿರ ಕೋಟಿ ಮಾತ್ರ ಬಜೆಟ್ ಮಂಡಿಸಬಹುದು. ವರ್ಷದ ಯಾವುದೇ ಸಂದರ್ಭದಲ್ಲಿ ಈ 9 ಸಾವಿರ ಕೋಟಿ ಕೂಡ ಮೀರಲು ಸಾಧ್ಯವಿಲ್ಲ ಎಂಬುದು ಅರಿವಾದರೆ ಆಯವ್ಯಯವನ್ನು ಪೂರ್ಣ ಪ್ರಮಾಣದಲ್ಲಿ ಪುನರ್ ಮಂಡಿಸಲು ಅವಕಾಶವಿದೆ. ಹೀಗಾಗಿ ಹೆಚ್ಚುವರಿ ಅನುದಾನಕ್ಕೆ ಮನವಿ ಸಲ್ಲಿಸಬಹುದು. ಆದರೆ, ಪ್ರಸಕ್ತ ಬಜೆಟ್ ಗಾತ್ರಕ್ಕೂ ಹಾಗೂ ಆದಾಯಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಇದು ಅನುಷ್ಠಾನ ಯೋಗ್ಯವಲ್ಲ.
13,544 ಕೋಟಿ ಆರ್ಥಿಕ ಹೊರೆ:
ಬಿಬಿಎಂಪಿ ಈವರೆಗೆ ಕೈಗೊಂಡಿರುವ ಮತ್ತು ಕೈಗೊಳ್ಳುವುದಕ್ಕೆ ತೀರ್ಮಾನಿಸಿರುವ ಅಭಿವೃದ್ಧಿ ಕಾಮಗಾರಿ, ವಿವಿಧ ಸಂಸ್ಥೆಗಳಿಂದ ಪಡೆದ ಸಾಲಕ್ಕೆ 2019-20 ಸಾಲಿನಲ್ಲಿ 13,544 ಕೋಟಿ ಪಾವತಿ ಮಾಡಬೇಕಿದೆ. ಇಷ್ಟೊಂದು ಮೊತ್ತದ ಹೊಣೆಗಾರಿಕೆ ಪಾಲಿಕೆ ಮೇಲಿದೆ. ಈ ಪೈಕಿ ಗುತ್ತಿಗೆದಾರರಿಗೆ 12,841 ಕೋಟಿ ಹಾಗೂ ಹಣಕಾಸು ಸಂಸ್ಥೆಗಳಿಗೆ .703 ಕೋಟಿ ಪಾವತಿಸಬೇಕಾಗಿದೆ. ಇಷ್ಟರ ಮಟ್ಟಿಗೆ ಪಾಲಿಕೆ ಮೇಲೆ ಆರ್ಥಿಕ ಹೊರೆ ಬಿದ್ದಿದೆ ಎಂದು ಆಯುಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ವಾಸ್ತವಿಕ ಬಜೆಟ್ ಮಂಡಿಸದಿರುವುದರಿಂದ ಗುತ್ತಿಗೆದಾರರ ಬಿಲ್ ಪಾವತಿ ಎರಡು ವರ್ಷ ವಿಳಂಬವಾಗುತ್ತಿದೆ. ಆರ್ಥಿಕ ಶಿಸ್ತು ತರುವ ಉದ್ದೇಶದಿಂದ ಮತ್ತು ಪಾಲಿಕೆ ಹಿತದೃಷ್ಟಿಯಿಂದ ಸರ್ಕಾರಕ್ಕೆ .9 ಸಾವಿರ ಕೋಟಿಗೆ ಬಜೆಟ್ ಸೀಮಿತಗೊಳಿಸಬೇಕೆಂದು ಪತ್ರ ಬರೆಯಲಾಗಿದೆ.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 3, 2019, 7:58 AM IST