ಹುಬ್ಬಳ್ಳಿ (ಜೂ. 25):  ಹಿರಿಯ ಜೆಡಿಎಸ್‌ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಮೂವರಿಗೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜೂ.14 ರಂದು ನಡೆದಿದೆ.

ಈ ಬಗ್ಗೆ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಅವರು ದೂರು ನೀಡಿದ್ದು ಪೊಲೀಸರು ಆರೋಪಿ ಬಂಧನಕ್ಕೆ ಜಾಲಬೀಸಿದ್ದಾರೆ. ಬೆಳಗಾವಿಯ ಮರಾಠಾ ರೆಜಿಮೆಂಟ್‌ನ ಸೈನಿಕ ಎಂದು ಹೇಳಲಾದ ರೋಹಿತ ಪಟ್ಟೇದ ಎಂಬಾತನೇ ಜೀವ ಬೆದರಿಕೆ ಹಾಕಿದ ವ್ಯಕ್ತಿ ಎಂದು ಹೇಳಲಾಗಿದೆ.

ಆಗಿದ್ದೇನು?: ಹೊರಟ್ಟಿಬೆಂಗಳೂರಿನಿಂದ ಹುಬ್ಬಳ್ಳಿಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಕಾರ್ಯಕ್ರಮವೊಂದರ ವಿಡಿಯೋ ನೋಡುತ್ತಿದ್ದ ಹೊರಟ್ಟಿಅವರನ್ನು ಮೇಲಿನ ಸೀಟಿನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ವ್ಯಾಲ್ಯೂಮ್‌ ಕಡಿಮೆ ಮಾಡುವಂತೆ ಹೇಳಿದ್ದಾನೆ. ಮೊಬೈಲ್‌ ಬಂದ್‌ ಮಾಡಿದ್ದಾರೆ.

ಸ್ವಲ್ಪ ಸಮಯದ ಬಳಿಕ ಪುನಃ ಆತ ಲೈಟ್‌ ಆಫ್‌ ಮಾಡುವಂತೆ ಹೇಳಿ ವಿನಾಕಾರಣ ಜಗಳ ತೆಗೆದಿದ್ದಾನೆ. ಮಾತ್ರವಲ್ಲ ಜಾಸ್ತಿ ಮಾತಾಡಿದರೆ ಶೂಟ್‌ ಮಾಡ್ಬಿಡ್ತೀನಿ ಎಂದು ರೈಲಿನಲ್ಲೇ ಹೊರಟ್ಟಿಸೇರಿದಂತೆ ಮೂವರಿಗೆ ಜೀವ ಬೆದರಿಕೆ ಹಾಕಿ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಬಳಿಕ ಟಿಟಿಇ ಅವರೇ ಹೊರಟ್ಟಿಅವರಿಗೆ ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿ ಸೀಟ್‌ ವ್ಯವಸ್ಥೆ ಮಾಡಿಕೊಂಡರು. ಈ ಸಂಬಂಧ ರೈಲ್ವೆ ಪೊಲೀಸ್‌ ಠಾಣೆಗೆ ಹೊರಟ್ಟಿ, 18ರಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನೆ ಬೆಂಗಳೂರಲ್ಲಿ ಆದ ಕಾರಣದಿಂದ ಪ್ರಕರಣವನ್ನು ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ಬೆಂಗಳೂರು ಸಿಟಿ ರೈಲ್ವೆ ಠಾಣೆಗೆ ವರ್ಗಾಯಿಸಿದ್ದಾರೆ.