ಬೆಂಗಳೂರು :  ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟ ಡಿ.21ರಂದು ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದೆ.

ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಯೂನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌ (ಯುಎಫ್‌ಬಿಯು) ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಂದಿನ ಮುಷ್ಕರಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ(ಎಐಬಿಒಸಿ) ಬ್ಯಾಂಕ್‌ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಡಿ.21ರಂದು ರಾಷ್ಟ್ರವ್ಯಾಪಿ ಮುಷ್ಕರ ಸಂಘಟಿಸಿದೆ.

ಯುಎಫ್‌ಬಿಯು ಅಡಿಯಲ್ಲಿ ದೇಶದ ಎಲ್ಲಾ ಬ್ಯಾಂಕ್‌ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಎಲ್ಲದಕ್ಕೂ ಬ್ಯಾಂಕ್‌ಗಳ ವಿಲೀನವೊಂದೇ ಪರಿಹಾರವಲ್ಲ. ಬ್ಯಾಂಕ್‌ ವಿಲೀನ ವಿಚಾರ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಣಯವಾಗಿದೆ. ಕೇಂದ್ರ ಸರ್ಕಾರ ಹಾಗೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಷನ್‌ ವಿರುದ್ಧ ಡಿ.21ರಂದು ಮುಷ್ಕರ ನಡೆಸಲಾಗುವುದು ಎಂದು ಎಐಬಿಒಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರದ ಅಂಗವಾಗಿ ಡಿ.21ರ ಶುಕ್ರವಾರ ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಪ್ರಸ್ತಾಪವನ್ನು ಕೈಬಿಡಬೇಕು. ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಬೇಕು. ನಿವೃತ್ತಿ ವೇತನ ಸಂಬಂಧ ಗೊಂದಲ ಪರಿಹರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ. ಅಂದು ಮೂರು ಸಾವಿರಕ್ಕೂ ಹೆಚ್ಚು ಮಂದಿ ಬ್ಯಾಂಕ್‌ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು?: ‘ಸತ್ಯ’ಬಾಯ್ಬಿಟ್ಟ ಕೇಂದ್ರ!

ಡಿ.26ರಂದು ಬ್ಯಾಂಕ್‌ಗಳ ಒಕ್ಕೂಟ (ಯುಎಫ್‌ಬಿಯು) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ದೇಶಾದ್ಯಂತ ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಸುಮಾರು 3 ಲಕ್ಷಕ್ಕೂ ಅಧಿಕ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದಾರೆ. ಬ್ಯಾಂಕ್‌ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲಿಸಿ ಅಂದು ಬೆಳಗ್ಗೆ 10ಕ್ಕೆ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ಜರುಗಲಿದೆ ಎಂದು ಮಾಹಿತಿ ನೀಡಿದರು.

ಎಚ್ಚರ! ಆಧಾರ್‌ಗೆ ಒತ್ತಾಯ ಮಾಡಿದ್ರೆ 1 ಕೋಟಿ ದಂಡ, 10 ವರ್ಷ ಜೈಲು!

ಐದು ದಿನ ಬ್ಯಾಂಕ್‌ ವಹಿವಾಟಿನಲ್ಲಿ ವ್ಯತ್ಯಯ

ಡಿ.21ರಿಂದ 26ರ ನಡುವೆ ಬ್ಯಾಂಕ್‌ ವಹಿವಾಟಿನಲ್ಲಿ ವ್ಯತ್ಯಯವಾಗಲಿದೆ. ಮುಂದಿನ ವಾರಾಂತ್ಯದ ಐದು ದಿನ ಎದುರಾಗಬಹುದಾದ ಆರ್ಥಿಕ ತೊಂದರೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಬ್ಯಾಂಕ್‌ ವ್ಯವಹಾರಗಳ ದಿನಗಳಲ್ಲಿ ಹಣದ ವಹಿವಾಟನ್ನು ತುರ್ತಾಗಿ ಮಾಡಿಕೊಳ್ಳುವುದು ಒಳಿತು.

ಡಿ.21: ದೇಶಾದ್ಯಂತ ಎಐಬಿಒಸಿ ಮುಷ್ಕರ

ಡಿ.22: ನಾಲ್ಕನೇ ಶನಿವಾರ ಬ್ಯಾಂಕ್‌ ರಜೆ

ಡಿ.23: ಭಾನುವಾರ ಸರ್ಕಾರಿ ರಜೆ

ಡಿ.25: ಕ್ರಿಸ್‌ಮಸ್‌ ರಜೆ

ಡಿ.24: ಬ್ಯಾಂಕ್‌ ತೆರೆದಿರುತ್ತದೆ.

ಡಿ.26: ಬ್ಯಾಂಕ್‌ ಒಕ್ಕೂಟದಿಂದ ಮುಷ್ಕರ