ನವದೆಹಲಿ (ಡಿ.19): ನೋಟು ಅಮಾನ್ಯೀಕರಣದ ವೇಳೆ  ಸೂಕ್ತ ಸಮಯದಲ್ಲಿ ಹಣ ಸಿಗದೇ ಮತ್ತು ಎಟಿಎಂ ಸರತಿ ಸಾಲಿನಲ್ಲಿ ನಿಂತ ಪರಿಣಾಮ ಹಲವಾರು ಜನ ಸಾವನ್ನಪ್ಪಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಕೊನೆಗೂ ಕೇಂದ್ರ ಸರ್ಕಾರ ಉತ್ತರ ನೀಡಿದೆ. 

ನೋಟು ಅಮಾನ್ಯೀಕರಣದ ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ  ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದು ಸತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಯಿಂದ, ಎಸ್​ಬಿಐ  ಮೂವರು ಸಿಬ್ಬಂದಿ ಹಾಗೂ ಒಬ್ಬರು ಗ್ರಾಹಕರು ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಜೇಟ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ.

ನೋಟು ಅಮಾನ್ಯೀಕರಣದಿಂದ ದೇಶದ ಉದ್ಯಮ ಹಾಗೂ ಉದ್ಯೋಗಿಗಳ ಮೇಲೆ ಉಂಟಾದ ಪರಿಸ್ಥಿತಿಯ ಕುರಿತು ಯಾವುದೇ ನಿರ್ದಿಷ್ಟ ಅಧ್ಯಯನವನ್ನು ಕೈಗೊಳ್ಳಲಾಗಿಲ್ಲ ಎಂದು  ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.

ಆದರೆ ಕೇಂದ್ರ ನೀಡಿರುವ ಮಾಹಿತಿಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇವಲ ನಾಲ್ಕು ಜನ ಅಸುನೀಗಿದ್ದಾರೆ ಎಂದು ಸರ್ಕಾರ ಸುಳ್ಳು ಹೇಳುತ್ತಿದ್ದು, ಇನ್ನೂ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ತಮ್ಮ ಹಳೆಯ ಆರೋಪವನ್ನು ಪುನರುಚ್ಛಸಿದ್ದಾರೆ.