ನವದೆಹಲಿ(ಡಿ.19): ಆಧಾರ್ ಕಡ್ಡಾಯ ಕುರಿತ ಸುಪ್ರೀಂ ತೀರ್ಪಿನ ಬಳಿಕ,  ಕಾರ್ಡ್ ನ ಅನಿವಾರ್ಯತೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

ಸಿಮ್ ಕಾರ್ಡ್ ಕೊಳ್ಳಲು ಹೋದಾಗ ಅಥವಾ ಬ್ಯಾಂಕ್ ಖಾತೆ ತೆರೆಯಬೇಕೆಂದರೆ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ ಅಲ್ಲ. ಒಂದು ವೇಳೆ ಗುರುತು ಮತ್ತು ವಿಳಾಸಕ್ಕೆ ಸಾಕ್ಷಿಯಾಗಿ ಆಧಾರ್ ಕಾರ್ಡನ್ನೇ ನೀಡಬೇಕೆಂದು ಒತ್ತಾಯಿಸಿದರೆ ಬ್ಯಾಂಕ್ ಅಥವಾ ಮೊಬೈಲ್ ಕಂಪನಿಗಳಿಗೆ 1 ಕೋಟಿಯವರೆಗೆ ದಂಡ ಮತ್ತು ಸಿಬ್ಬಂದಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುವುದು. 

ಮನಿ ಲಾಂಡರಿಂಗ್ ಆ್ಯಕ್ಟ್ ಮತ್ತು ಇಂಡಿಯನ್ ಟೆಲಿಗ್ರಾಫ್ ಆ್ಯಕ್ಟ್‌ನಲ್ಲಿ ತಿದ್ದುಪಡಿ ಮಾಡಲಾಗಿದ್ದು,  ಕ್ಯಾಬಿನೇಟ್‌ನಲ್ಲಿ ಅದಕ್ಕೆ ಸಮ್ಮತಿ ಕೂಡ ಪಡೆಯಲಾಗಿದೆ. 

ಆಧಾರ್ ಮಾಹಿತಿ ಸೋರಿಕೆಗೆ ಯತ್ನಿಸಿದರೆ ಈವರೆಗೂ ಇರುವ 3 ವರ್ಷಗಳ ಜೈಲು ಶಿಕ್ಷೆಯನ್ನು 10 ವರ್ಷಗಳವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆಧಾರ್‌ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಬ್ಯಾಂಕ್‌ ಖಾತೆ, ಹೊಸ ಸಿಮ್‌ ಕಾರ್ಡ್‌ ಖರೀದಿ, ಶಾಲಾ ನೋಂದಣಿ ಮುಂತಾದ ಹಲವು ಉದ್ದೇಶಗಳಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಜೋಡಣೆಯನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.