ಬೆಂಗಳೂರು[ಸೆ.16]: ಐಬಿಪಿಎಸ್‌ನ ಎಲ್ಲಾ ಪರೀಕ್ಷೆಗಳನ್ನೂ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ.

‘ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಆರ್‌ಆರ್‌ಬಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ. ಈ ವಿಚಾರದಲ್ಲಿ ಕೀಳು ರಾಜಕೀಯ ಮಾಡಬೇಡಿ ಸಿದ್ದರಾಮಯ್ಯ ಅವರೇ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದರು.

ಇದಕ್ಕೆ ಟ್ವೀಟ್‌ ಮೂಲಕವೇ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಪ್ರಾದೇಶಿಕ ಬ್ಯಾಂಕ್‌ಗಳ ಪರೀಕ್ಷೆಯನ್ನು 2014ರವರೆಗೆ ಕನ್ನಡದಲ್ಲೇ ಬರೆಯಲು ಅವಕಾಶ ಇತ್ತು. ನಿಮ್ಮ ಕೆಟ್ಟಆಡಳಿತ ಬಂದ ಮೇಲೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಬರೆಯಬೇಕು ಎಂಬ ನಿಯಮ ಮಾಡಲಾಗಿದೆ. ಕನ್ನಡಿಗರ ಜನಪ್ರತಿನಿಧಿಯಾಗಿ ಮೊದಲು ಬೆನ್ನುಮೂಳೆ ಸರಿಪಡಿಸಿಕೊಂಡು ಕನ್ನಡದ ಹಿತಾಸಕ್ತಿ ಪರವಾಗಿ ನಿಲ್ಲುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ.

ಐಬಿಪಿಎಸ್‌ ಪರೀಕ್ಷೆ ಎಂದರೆ ಆಕಾಂಕ್ಷಿಗಳು ಆರ್‌ಆರ್‌ಬಿ ಪರೀಕ್ಷೆ ಮಾತ್ರವೇ ಬರೆಯುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಆರ್‌ಆರ್‌ಬಿ ಎರಡೂ ವಿಭಾಗದಲ್ಲೂ ಬರೆಯುತ್ತಾರೆ. ಐಬಿಪಿಎಸ್‌ ಪರೀಕ್ಷೆಯನ್ನು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರವೇ ಬರೆಯಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಹಿಂದಿಯೇತರ ಅಂಗವಿಕಲ ಅಭ್ಯರ್ಥಿಗಳನ್ನು ಈಜು ಸ್ಪರ್ಧೆಗೆ ಇಳಿಸಿದಂತಾಗಲಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಹಾಗೂ ನಿರ್ಲಕ್ಷ್ಯವು ಎಲ್ಲಾ ದುಷ್ಟಗಳಿಗೂ ಮೂಲ ಎಂದು ಕಿಡಿಕಾರಿದ್ದಾರೆ.

ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ

ಅಮಿತ್‌ಶಾಗೆ ಪಾಠ ಕಲಿಸಬೇಕಿದೆ: ಸಿದ್ದು

ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ಭಾರತ ದೇಶಕ್ಕೆ ಶ್ರೀಮಂತ ಇತಿಹಾಸ ಇದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಾಂಸ್ಕೃತಿಕ ವೈಭವವನ್ನು ಬಿಂಬಿಸುತ್ತದೆ. ದೇಶ ಒಟ್ಟಾಗಿರಲು ವೈವಿದ್ಯತೆಯನ್ನು ಗೌರವಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!

ಆದರೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ಅವಿಭಜಿತ ಕುಟುಂಬದಲ್ಲಿರುವ ದುಷ್ಟನಂತೆ. ಪ್ರತಿ ಬಾರಿಯೂ ಒಗ್ಗಟ್ಟನ್ನು ಒಡೆಯುವ ದಾರಿ ಹುಡುಕುತ್ತಾರೆ. ಈ ಮನೆಹಾಳ ಮನುಷ್ಯನಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.