ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!

ಒಂದೇ ದೇಶ, ಒಂದೇ ಭಾಷೆ ಬೇಕೆಂದ ಗೃಹ ಸಚಿವ ಅಮಿತ್ ಶಾ| ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧ: ಗುಡುಗಿದ ಸಿದ್ದರಾಮಯ್ಯ

Former CM Siddaramaiah opposes Hindi Diwas celebration

ಬೆಂಗಳೂರು[ಸೆ.14]: ಹಿಂದಿ ದಿವಸ ಆಚರಣೆ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಒಂದೇ ದೇಶ, ಒಂದೇ ಭಾಷೆ ಹಿಂದಿ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿ ಎಂದು ಟ್ವೀಟ್ ಮಾಡಿದ್ದರೆ. ಇತ್ತ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಿಂದಿ ದಿನ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೌದು ಕನ್ನಡ ನಾಡು, ಭಾಷೆ ಪರ ಧ್ವನಿ ಎತ್ತುವಲ್ಲಿ ಸದಾ ಮುಂಚೂಣಿಯಲ್ಲಿರುವ ಸಿದ್ದರಾಮಯ್ಯ, ಆರಂಭದಿಂದಲೂ ಬಲವಂತದ ಹಿಂದಿ ಹೇರಿಕೆಗೆ ತೀವ್ರ ವ್ಯಕ್ತಪಡಿಸುತ್ತಾ ಬಂದಿದ್ದರು. ಇದೀಗ ಗೃಹ ಸಚಿವ ಅಮಿತ್ ಶಾ ಹಿಂದಿ ರಾಷ್ಟ್ರೀಯ ಭಾಷೆಯನ್ನಾಗಿಸುವ ಟ್ವೀಟ್ ಮಾಡಿರುವ ಬೆನ್ನಲ್ಲೇ ಮತ್ತೆ ಸಿಡಿದೆದ್ದಿದ್ದಾರೆ.

ರಾಷ್ಟ್ರೀಯ ಹಿಂದಿ ದಿನದಂದು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ 'ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧ ಇದೆ' ಎಂದು ಗುಡುಗಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಗೃಹ ಸಚಿವ ಅಮಿತ್ ಶಾಗೆ ಟಾಂಗ್ ನೀಡಿರುವ ಸಿದ್ದರಾಮಯ್ಯ 'ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು.  ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ' ಎಂದಿದ್ದಾರೆ.

ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ

ಬ್ಯಾಂಕಿಂಗ್‌ ಪರೀಕ್ಷೆ ಕನ್ನಡದಲ್ಲಿ ಇಲ್ಲದ್ದಕ್ಕೆ ಸಿದ್ದು, ಎಚ್‌ಡಿಕೆ ಗರಂ

ಇನ್ನು ನಿನ್ನೆ ಶುಕ್ರವಾರವೂ ಬ್ಯಾಂಕಿಂಗ್ ಪರೀಕ್ಷೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಸಂಸದರನ್ನು ತೀವ್ರ ತರಾಟೆಗೆ ತೆರೆದುಕೊಂಡಿದ್ದರು. ಕನ್ನಡ ನಾಡು-ನುಡಿ ಬಗೆಗಿನ ಮಲತಾಯಿ ಧೋರಣೆಯಿಂದ ಕೇಂದ್ರ ಸರ್ಕಾರ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುತ್ತಿದೆ. ಹಿಂದಿ ಹೇರಿಕೆ, ನಾಡಧ್ವಜಕ್ಕೆ ಅಡ್ಡಗಾಲು, ನೆರೆ ಪರಿಹಾರದಲ್ಲಿ ನಿರ್ಲಕ್ಷ್ಯ ಹೀಗೆ ಪ್ರತಿ ವಿಚಾರದಲ್ಲೂ ಕರ್ನಾಟಕದ ಕೂಗಿಗೆಗೆ ಬೆಲೆಯೇ ಇಲ್ಲದಂತಾಗಿದೆ. ಇದೀಗ ಐಬಿಪಿಎಸ್‌ ವಿಷಯದಲ್ಲೂ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಮೋಸ ಮಾಡಿದೆ. ಕನ್ನಡಿಗರ ಔದಾರ್ಯ ಮತ್ತು ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಎಚ್ಚರಿಸಿದ್ದಾರೆ.

ರಾಜ್ಯದಿಂದ 25 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯದೇ ಸರ್ಕಾರವಿದೆ. ಆದರೂ ಐಬಿಪಿಎಸ್‌ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲು ವಿಫಲರಾಗಿದ್ದಾರೆಂದರೆ ನಾಚಿಕೆಗೇಡಿನ ವಿಚಾರವಲ್ಲವೇ? ನಾಡು, ನುಡಿ, ಜನರ ಮೇಲಿಲ್ಲದ ಬದ್ಧತೆ ಇನ್ನೇತಕ್ಕಿದೆ? ಎಂದು ಕಿಡಿಕಾರಿದ್ದಾರೆ.

ಕನ್ನಡ ನಾಡಿನ ಜನತೆ ಬಿಜೆಪಿಗೆ ಅಧಿಕಾರ ನೀಡಿ ಆಶೀರ್ವದಿಸಿದ್ದರೂ ಐಬಿಪಿಎಸ್‌ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗದಿರುವುದು ಕನ್ನಡಿಗರಿಗೆ ಬಗೆದ ದ್ರೋಹ. ಕನ್ನಡಿಗರು ಇದನ್ನು ಸಹಿಸರು ಎಂದು ಹೇಳಿದ್ದಾರೆ.

ಇದು ಇಂಡಿಯಾ, ಹಿಂಡಿಯಾ ಅಲ್ಲ: ಸ್ಟಾಲಿನ್ ಅಬ್ಬರಕ್ಕೆ 'ಉತ್ತರ' ತತ್ತರ!

ಭಾಷಾ ವೈವಿಧ್ಯತೆ ಬಗ್ಗೆ ಬಿಜೆಪಿಗೆ ಪಾಠ ಹೇಳಬೇಕಿದೆ. ಕರ್ನಾಟಕದ ಬಿಜೆಪಿ ಜನಪ್ರತಿನಿಧಿಗಳು ಮಾಡುತ್ತಿರುವುದಾದರೂ ಏನು? ಅವರೂ ಸಹ ಹಿಂದಿಯನ್ನು ಪರಮೋಚ್ಚ ಎಂದು ಬಿಂಬಿಸಲು ಅಣಿಯಾಗಿದ್ದಾರೆಯೇ? ನಾಚಿಕೆಗೇಡು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ‘ಕನ್ನಡಿಗರ ಹಲವಾರು ಬೇಡಿಕೆಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಐಬಿಪಿಎಸ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios