ಬೆಂಗಳೂರು[ಅ.11]: ದೆಹಲಿ ಮೂಲದ ಯುವತಿಯನ್ನು ಹಿಡಿದು ಆಟೋ ಚಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಮೂಲದ 25 ವರ್ಷದ ಸಂತ್ರಸ್ತ ಯುವತಿ ವಿವೇಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಸಂತ್ರಸ್ತ ಯುವತಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕೋರಮಂಗಲದ 8ನೇ ಬ್ಲಾಕ್‌ನಲ್ಲಿರುವ ಪಿ.ಜಿ.ಯಲ್ಲಿ (ಪೇಯಿಂಗ್‌ ಗೆಸ್ಟ್‌) ನೆಲೆಸಿದ್ದಾರೆ. ಇನ್ಫೆಂಟ್ರಿ ರಸ್ತೆಯಲ್ಲಿರುವ ಖಾಸಗಿ ಜಾಹೀರಾತು ಕಂಪನಿಯಲ್ಲಿ ಯುವತಿ ಉದ್ಯೋಗಿಯಾಗಿದ್ದಾರೆ.  ಸೋಮವಾರ (ಅ.8) ರಾತ್ರಿ ಸಂತ್ರಸ್ತ ಯುವತಿ ಕೆಲಸ ಮುಗಿಸಿ ಮನೆಗೆ ಹೋಗಲು ಇನ್ಫೆಂಟ್ರಿ ರಸ್ತೆಯಲ್ಲಿ ರಾತ್ರಿ 8.45ರ ಸುಮಾರಿಗೆ ಆಟೋ ಹತ್ತಿದ್ದರು. ಈಜಿಪುರ ಮುಖ್ಯರಸ್ತೆಯಲ್ಲಿ ಹೋಗುತ್ತಿರುವಾಗ ಆಟೋ ಚಾಲಕ ಕತ್ತಲು ಇರುವ ಸ್ಥಳದಲ್ಲಿ ಆಟೋವನ್ನು ನಿಲುಗಡೆ ಮಾಡಿದ್ದ. 

ಆಟೋವನ್ನು ರಸ್ತೆ ಬದಿ ಚಾಲಕ ನಿಲುಗಡೆ ಮಾಡಿದ್ದರಿಂದ ಸಂತ್ರಸ್ತ ಯುವತಿ ಆಟೋ ಸಮಸ್ಯೆಯಾಗಿರಬಹುದು ಎಂದುಕೊಂಡು ಚಾಲಕನನ್ನು ಪ್ರಶ್ನೆ ಮಾಡದೆ ಕುಳಿತಿದ್ದರು. ಆಟೋದಿಂದ ಕೆಳಗೆ ಇಳಿದ ಚಾಲಕ ಏಕಾಏಕಿ ಪ್ರಯಾಣಿಕ ಯುವತಿ ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ. ನಂತರ ಆಕೆಯ ಕೈ-ಹಿಡಿದು ಎಳೆದಾಡಿದ್ದಾನೆ. ಇದರಿಂದ ಆತಂಕಗೊಂಡ ಪ್ರಯಾಣಿಕ ಯುವತಿ ಚೀರಾಡುತ್ತಾ ಆರೋಪಿ ಕೈಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಕೂಡಲೇ ಆರೋಪಿ ಕೂಡ ಆಟೋ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಬಳಿಕ ಯುವತಿ ಮತ್ತೊಂದು ವಾಹನದಲ್ಲಿ ಪಿ.ಜಿ.ಗೆ ತೆರಳಿದ್ದು, ಮರುದಿನ ಬಂದು ದೂರು ದಾಖಲಿಸಿದ್ದಾರೆ.