ನವದೆಹಲಿ(ಸೆ.14): ಕಾವೇರಿ ಜಲ ವಿವಾದ ಮತ್ತು ಕರ್ನಾಟಕದಲ್ಲಿನ ಗಲಭೆ, ಹಿಂಸಾಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊನೆಗೂ ಮೌನ ಮುರಿದಿದ್ದಾರೆ.
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಯಿಂದ ವೈಯಕ್ತಿಕವಾಗಿ ನನಗೆ ನೋವಾಗಿದೆ ಎಂದಿದ್ದಾರೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ಸಂಯಮ ಮತ್ತು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಾನೂನಿನ ಚೌಕಟ್ಟಿನೊಳಗೆ ಮಾತುಕತೆ ಮೂಲಕ ಮಾತ್ರ ಈ ವಿವಾದವನ್ನು ಬಗೆಹರಿಸಿಕೊಳ್ಳಬಹುದಷ್ಟೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೀವೆಲ್ಲರೂ ರಾಷ್ಟ್ರದ ವಿಷಯ ಬಂದಾಗ ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತೀರಿ ಎಂದು ನಂಬುತ್ತೇನೆ. ಸೌಹಾರ್ದಯುತವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
